Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕಳೆದ ಬಾರಿ ದಸರಾ ಟಿಕೆಟ್‌ ವಿಚಾರದಲ್ಲಿ ಅವ್ಯವಹಾರ: ವಾಯ್ಸ್‌ ಆಫ್‌ ಪೀಪಲ್‌ ಸಂಸ್ಥೆ ಆರೋಪ

ಮೈಸೂರು: ಕಳೆದ ಬಾರಿಯ ದಸರಾ ಟಿಕೆಟ್‌ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ವಾಯ್ಸ್‌ ಆಫ್‌ ಪೀಪಲ್‌ ಸಂಸ್ಥೆ ಮುಖ್ಯಸ್ಥ ವಸಂತ್‌ ರಾವ್‌ ಚೌವ್ಹಾಣ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ 79,860 ದಸರಾ ಟಿಕೆಟ್‌ಗಳಲ್ಲಿ 25,703 ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮೀಸಲು ಇಡಲಾಗಿತ್ತು.

ಆದರೆ ಸಾರ್ವಜನಿಕರಿಗೆ ಮಾರಾಟವಾದ ಟಿಕೆಟ್‌ಗಳು 4617 ಮಾತ್ರ. 54,157 ಟಿಕೆಟ್‌ಗಳು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಮೀಸಲಾಗಿದ್ದವು. ಸಾರ್ವಜನಿಕರಿಗೆ ಮೀಸಲಿಟ್ಟ ಟಿಕೆಟ್‌ ರಾಜಕೀಯ ಪುಡಾರಿಗಳ ಪಾಲಾಗಿತ್ತು ಎಂದು ಕಿಡಿಕಾರಿದರು.

ಇನ್ನು ಇದರಿಂದ ಸರ್ಕಾರಕ್ಕೆ 2,63,38,000 ರೂ ನಷ್ಟವಾಗಿದೆ. ನೆಪಮಾತ್ರಕ್ಕೆ ಸಾರ್ವಜನಿಕರಿಗೆ ಮೀಸಲು ಎಂದು ದುಪ್ಪಟ್ಟು ಬೆಲೆಗೆ ರಾಜಕೀಯ ಪುಡಾರಿಗಳಿಂದ ಬ್ಲಾಕ್‌ನಲ್ಲಿ ಟಿಕಟ್‌ ಮಾರಾಟ ಮಾಡಲಾಗುತ್ತದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ದಾಖಲೆಗಳಿಂದ ಈ ವಿಚಾರ ಬಯಲಿಗೆ ಬಂದಿದೆ. ಈ ಕುರಿತು ಈಗಾಗಲೇ ಲೋಕಾಯುಕ್ತ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದೇವೆ.

ನಾಡಹಬ್ಬ ದಸರಾ ಕೇವಲ ಅಧಿಕಾರಿಗಳು ಹಾಗೂ ರಾಜಕಾರಣಿಗಳ ದಸರಾ ಆಗುತ್ತಾ ಇದೆ. ದಯಮಾಡಿ ಈ ಬಾರಿ ಇಂತಹ ಅವ್ಯವಹಾರ ತಪ್ಪಿಸಿ ಜನತಾ ದಸರಾ ಮಾಡಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸುಜಯ್‌ ಕುಮಾರ್‌ ಸಿಂಗ್‌, ಕಾರ್ಯದರ್ಶಿ ರಾಕೇಶ್‌, ನಿರ್ದೇಶಕ ಪ್ರದೀಪ್‌ ಬಿಡ್ಡನ್‌, ಸದಸ್ಯರಾದ ಪ್ರಜ್ವಲ್‌ ಕೃಷ್ಣ, ಭರತ್‌ ಕುಮಾರ್‌, ಎಸ್.ಸಂತೋಷ್‌ ಪೈ, ವೇಣುಗೋಪಾಲ್‌ ಹಾಜರಿದ್ದರು.

 

 

Tags: