ಮೈಸೂರು: ದಸರಾ ವೇದಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಸಿಎಂ ಪರ ಮಾತನಾಡುವ ಮೂಲಕ ರಾಜಕೀಯ ತಂದಿದ್ದಾರೆ ಎಂದು ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.
ನಿನ್ನೆ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಆದ ಬಳಿಕ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಬ್ಯಾಟ್ ಮಾಡಿದ್ದರು.
ಈ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು, ದಸರಾ ವೇದಿಕೆಯಲ್ಲಿ ರಾಜಕೀಯ ತಂದಿದ್ದಾರೆ. ಜಿ.ಟಿ.ದೇವೇಗೌಡ ಹಿರಿಯರಿದ್ದಾರೆ. ಯಾಕೆ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಮುಡಾ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾದಲ್ಲಿ ಬರೀ 14 ಸೈಟ್ ಅಲ್ಲ, 4500 ಸೈಟ್ ಅಕ್ರಮವಾಗಿದೆ. ಸಿಎಂ ಸಿದ್ದರಾಮಯ್ಯರನ್ನು ಮುಂದಿಟ್ಟುಕೊಂಡು ಎಲ್ಲರೂ ರಕ್ಷಣೆ ಪಡೆಯುತ್ತಿದ್ದಾರೆ. ಮುಡಾ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಆಗುತ್ತಿದೆ. ಎಲ್ಲಾ ವಿಚಾರದಲ್ಲೂ ಸರ್ಕಾರ ತಪ್ಪು ಮಾಡಿದೆ. ಈ ಹಿನ್ನೆಲೆಯಲ್ಲಿ ಎಲ್ಲದರ ಬಗ್ಗೆಯೂ ತನಿಖೆ ಆದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಆಗ್ರಹಿಸಿದರು.