ಮೈಸೂರು: ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು, ಸೊಂಡಿಲಿನ ಮೂಲಕ ತ್ರಿವರ್ಣ ಧ್ವಜ ಹಿಡಿದು, ನಗರವನ್ನು ಸ್ವಚ್ಛತೆಯಾಗಿ ಇಡುವಂತೆ ಸಂದೇಶ ಸಾರಿದವು.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮನೆ ಮನೆಯಲ್ಲೂ ತ್ರಿವರ್ಣ, ಮನೆ ಮನೆಯಲ್ಲೂ ಸ್ವಚ್ಛತೆ ಕಾರ್ಯಕ್ರಮ ಅಂಗವಾಗಿ ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಏಕಲವ್ಯ, ಧನಂಜಯ, ಕಂಜನ್, ಕಾವೇರಿ, ಲಕ್ಷ್ಮಿ, ಮಹೇಂದ್ರ, ಭೀಮ ಆನೆಗಳು ಸೊಂಡಿಲಿನ ಮೂಲಕ ತ್ರಿವರ್ಣ ಧ್ವಜ ಹಿಡಿದು ಸಾಗಿದವು.
ನಂತರ ಆನೆಗಳ ಮೇಲೆ ಕುಳಿತ ಮಾವುತರು, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಆನೆಗಳ ಮೇಲೆ ಧ್ವಜ ಹಿಡಿದು, ಕೆ.ಆರ್.ಆಸ್ಪತ್ರೆ ವೃತ್ತದವರೆಗೆ ಸಾಗಿ, ವಾಪಸ್ ಅರಮನೆಗೆ ಪ್ರವೇಶ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಕೂಡ ತ್ರಿವರ್ಣ ಧ್ವಜ ಹಿಡಿದು ಸಾಗಿದರು.
ನಗರ ಪಾಲಿಕೆ ಸಿಬ್ಬಂದಿ ಮನೆ ಮನೆಯಲ್ಲೂ ತ್ರಿವರ್ಣ, ಮನೆ ಮನೆಯಲ್ಲೂ ಸ್ವಚ್ಛತೆ ಎಂದು ಘೋಷಣೆ ಕೂಗುತ್ತ, ನಗರವನ್ನು ಸ್ವಚ್ಛವಾಗಿ ಇಡಲು ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪಾಲಿಕೆ ಆಯುಕ್ತ ತನ್ವೀರ್ ಶೇಕ್ ಆಸೀಫ್ ಅವರು, ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ನಗರವನ್ನು ಸ್ವಚ್ಛವಾಗಿಡಲು ಕೈ ಜೋಡಿಸಬೇಕು. ಮುಂದಿನ ಬಾರಿ ಮೈಸೂರು ಸ್ವಚ್ಛತೆಯಲ್ಲಿ ನಂಬರ್ ಒನ್ ಸ್ಥಾನಗಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ದಸರಾದೊಳಗೆ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.





