Mysore
26
few clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ವಿವಾದ: ಮಾಜಿ ಸಂಸದ ಪ್ರತಾಪ್ ಸಿಂಹಗೆ ರಘು ಕೌಟಿಲ್ಯ ಟಾಂಗ್

ಮೈಸೂರು: ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರನ್ನು ನಾಮಕರಣ ಮಾಡುವುದರಲ್ಲಿ ತಪ್ಪೇನಿಲ್ಲವೆಂಬ ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್‌.ರಘು ಕೌಟಿಲ್ಯ ಟಾಂಗ್‌ ಕೊಟ್ಟಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಡಿಸೆಂಬರ್‌.26) ಮಾಜಿ ಸಂಸದ ಪ್ರತಾಪ್‌ ಸಿಂಹ ಬುಧವಾರ ಸಿಎಂ ಸಿದ್ದರಾಮಯ್ಯ ಪರ ನೀಡಿದ ಹೇಳಿಕೆಗಳಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮೊಸರಲ್ಲಿ ಕಲ್ಲು ಹುಡುಕುವ ಕೆಲಸನೂ ಮಾಡುತ್ತಿಲ್ಲ. ಪಕ್ಷ ರಾಜಕಾರಣವನ್ನು ಮಾಡುತ್ತಿಲ್ಲ.  ಮೊದಲು ಸಿದ್ದರಾಮಯ್ಯ ಅವರಿಗೆ ಪ್ರತಾಪ್‌ ಸಿಂಹ ಬಕೆಟ್‌ ಹಿಡಿಯುವುದನ್ನು ಬಿಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಕಳಂಕಿತರು ಎಂಬ ಅನುಮಾನ ವ್ಯಕ್ತವಾಗಿದೆ. ಆ ತನಿಖೆಯಲ್ಲಿ ಸಿದ್ದರಾಮಯ್ಯ ಅವರು ತಾವು ಕಳಂಕಿತರಲ್ಲ ಎಂದು ರುಜುವಾತು ಆಗಲಿ. ಅ ನಂತರ ರಸ್ತೆಗೆ ಅವರ ಹೆಸರನ್ನು ನಾಮಕರಣ ಚಿಂತನೆ ನಡೆಸಬೇಕೆಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಮಾಜಿ ಸಂಸದ ಪ್ರತಾಪ್‌ ಅವರು ಯಾರನ್ನೂ ಓಲೈಕೆ ಮಾಡುತ್ತಿದ್ದಾರೆಂದು ಎಲ್ಲರಿಗೂ ತಿಳಿಯುತ್ತಿದೆ. ಎಲ್ಲವನ್ನೂ ನಾನೇ ಮಾಡಿದ್ದು ಎಂದು ಹೇಳುತ್ತಾರೆ. ಇವರು ಯಾರ ಹೆಸರಲ್ಲಿ ಗೆದ್ದಿದ್ದು ಎಂದು ಮೊದಲು ನೆನಪಿಸಿಕೊಳ್ಳಲಿ. ಆದರೆ ಬಿಜೆಪಿ ಪಕ್ಷದ ನಿಲುವವನ್ನು ಸ್ಪಷ್ಟವಾಗಿ ಹೇಳುವುದಾದರೆ ಆ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ. ಸಿದ್ದರಾಮಯ್ಯ ಹೆಸರಿಗೆ ಪ್ರತಾಪ್ ಸಿಂಹ ಬೆಂಬಲ ವೈಯಕ್ತಿಕ ನಿಲುವು ಇರಬಹುದು. ಆದರೆ ಪಕ್ಷದ ನಿಲುವು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯರು ಇಲ್ಲ. ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಈ ತೀರ್ಮಾನವನ್ನು ಕೈಗೊಂಡಿದ್ದಾರೆ. ಆದರೂ ಕೆಲವರು ಓಲೈಕೆಗಾಗಿ ಸಿದ್ದರಾಮಯ್ಯ ರಸ್ತೆ ಹೆಸರಿಟ್ಟು ನಾಮಕರಣ ಮಾಡಲು ಮುಂದಾಗಿದ್ದಾರೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದ್ದಾರೆ.

Tags:
error: Content is protected !!