Mysore
19
overcast clouds
Light
Dark

ಸಿದ್ದರಾಮಯ್ಯ ವಿರುದ್ಧ ಹುನ್ನಾರ: ಆ.3 ರಂದು ಬಿಜೆಪಿ ಕಛೇರಿಗೆ ಮುತ್ತಿಗೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಯತ್ನಿಸುತ್ತಿರುವ ಬಿಜೆಪಿ-ಜೆಡಿಎಸ್‌ ವಿರುದ್ಧ ಹೋರಾಟ ಮಾಡಲು ಆ.3 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್‌ ಶಿವರಾಮು ತಿಳಿಸಿದರು.

ಅಂದು ಬೆಳಿಗ್ಗೆ 10;30 ಕ್ಕೆ ಮಹರಾಜ ಕಾಲೇಜು ಮೈದಾನದಲ್ಲಿ ಜಮಾವಣೆಗೊಂಡು ಕೋರ್ಟ್‌ ಬಳಿಯ ಮಹಾತ್ಮಗಾಂಧಿ ಪ್ರತಿಮೆಗೆ ಹಾರ ಹಾಕಿ ನಮಿಸಿ, ನಂತರ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಒಂದೇ ಒಂದು ಅಜೆಂಡ ಇಟ್ಟುಕೊಂಡು ಬಿಜೆಪಿ-ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ಧದ ಹುನ್ನಾರವು ಅಹಿಂದ ಅಸ್ಥಿತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಹೀಗಾಗಿ ಅಹಿಂದ ವರ್ಗಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.

ಅಹಿಂದ ನಾಯಕತ್ವ ನಾಶಕ್ಕೆ ಹುನ್ನಾರ
ಬಿಜೆಪಿ ಜೆಡಿಎಸ್‌ ಪಕ್ಷಗಳು ಅಹಿಂದ ವರ್ಗಗಳ ನಾಯಕ ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ. ಅಹಿಂದ ರಾಜಕೀಯ ನಾಯಕತ್ವವನ್ನು ನಾಶಮಾಡುವುದೇ ಬಿಜೆಪಿ-ಜೆಡಿಎಸ್ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ರಾಜ್ಯಪಾಲರ ಮೂಲಕ ಬಿಜೆಪಿ ಷಡ್ಯಂತ್ರ
ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸಲು ಕೇಂದ್ರದ ಬಿಜೆಪಿ ನಾಯಕರು ರಾಜ್ಯಪಾಲರ ಮೂಲಕ ಸುಪಾರಿ ಕೊಟ್ಟಿದ್ದಾರೆ. ರಾಜ್ಯಪಾಲರು ಬಿಜೆಪಿಯ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೋಲೆ. ನಾಡಿನ ಶೋಷಿತ ಸಮುದಾಯ ಇದನ್ನೆಲ್ಲಾ ಗಮನಿಸುತ್ತಿದೆ ಎಂದರು.