ಮೈಸೂರು: ರಾಜ್ಯದ ಉಭಯ ಸದನದಲ್ಲಿ ನಿನ್ನೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರದ ಭಾಷಣವನ್ನು ಮೊಟಕುಗೊಳಿಸಿ ಹೊರ ನಡೆದ ನಡೆಯನ್ನು ಖಂಡಿಸಿ ಮೈಸೂರಿನಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ರಾಜ್ಯಪಾಲರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ “ರಾಜ್ಯಪಾಲರು ರಾಜ್ಯ ಬಿಟ್ಟು ತೆರಳಬೇಕು” ಎಂಬ ಘೋಷಣೆಗಳು ಮೊಳಗಿದವು.
ಪ್ರತಿಭಟನೆಯನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನೇತೃತ್ವದಲ್ಲಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಎಂ.ಕೆ.ಸೋಮಶೇಖರ್ ಅವರು, ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಲ್ಲದೆ, ಸರ್ಕಾರದ ಭಾಷಣವನ್ನು ಮೊಟಕುಗೊಳಿಸುವ ಮೂಲಕ ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ನಡೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೂಡಲೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.





