ಮೈಸೂರು: ಸ್ಮಾರ್ಟ್ ಮೀಟರ್ ವಿಚಾರದಲ್ಲೂ ಬಿಜೆಪಿಯವರು ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಇಂಧನ ಸಚಿವ ಕೆ.ಜೆ.ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ.
ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾಡಿರುವ ಆರೋಪಕ್ಕೆ ಸಾಕ್ಷಿಗಳಿದ್ದರೆ ತೋರಿಸಲಿ. ಡಿ.ಕೆ.ರವಿ ಸಾವು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಆಗ ಸಿಬಿಐನವರು ನನ್ನನ್ನು ಕರೆಸಲೇ ಇಲ್ಲ. ಇದೇ ರೀತಿ ಬಿಜೆಪಿಯವರು ಸ್ಮಾರ್ಟ್ ಮೀಟರ್ ವಿಚಾರದಲ್ಲೂ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಕೋರ್ಟ್‌ಗೆ ಹೋಗಲಿ. ನಾನೇನು ಟಾರ್ಗೆಟ್ ಆಗ್ತಾ ಇಲ್ಲ. ಕಾಂಗ್ರೆಸ್ ಪಕ್ಷವೇ ಬಿಜೆಪಿಯವರ ಟಾರ್ಗೆಟ್. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಇದನ್ನು ಸಹಿಸಲು ಆಗದೇ ಈ ರೀತಿ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.





