ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 3400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಸರಿಯಾಗಿ ಆಡಳಿತ ನಡೆಸಲು ವಿಫಲವಾಗಿದೆ. ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚು ಪೂರೈಕೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೇ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ? ಎಂದು ಪ್ರಶ್ನೆ ಮಾಡಿದರು.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 3400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ನೀಡುತ್ತಿದ್ದ 10 ಸಾವಿರ ಪ್ರೋತ್ಸಾಹ ಧನವನ್ನು ನಿಲ್ಲಿಸಿದ್ದಾರೆ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





