ಮೈಸೂರು: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರು ಲೋಕಾಯುಕ್ತಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಇಂದು ಲೋಕಾಯುಕ್ತ ಕಚೇರಿಗೆ ಕಾಂಗ್ರೆಸ್ ಮುಖಂಡರೊಡನೆ ಭೇಟಿ ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಸ್ನೇಹಮಯಿ ಕೃಷ್ಣ ವಿರುದ್ಧ ದೂರು ನೀಡಿದ್ದಾರೆ.
ಬಳಿಕ ಮಾತನಾಡಿದ ಲಕ್ಷ್ಮಣ್, ಲೋಕಾಯುಕ್ತ ಅಧಿಕಾರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಲೋಕಾಯುಕ್ತ ಅಧಿಕಾರಿಗಳಿಗೆ ಲಕ್ಷ್ಮಣ್ ಒತ್ತಡ ನೀಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಪದೇ ಪದೇ ಆರೋಪ ಮಾಡುತ್ತಿದ್ದಾನೆ. ಇದೆಲ್ಲಾ ಕೇವಲ ಊಹಾಪೋಹ. ಲೋಕಾಯುಕ್ತಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸ್ನೇಹಮಯಿ ಕೃಷ್ಣ ವಿರುದ್ಧ ಅನೇಕ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ನಾವು ಅವನ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ ಎಂದರು.
ಇನ್ನು ಮುಡಾ ಅಕ್ರಮದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಸಾಕ್ಷಿ ನಾಶ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಸಾಕ್ಷಿ ನಾಶ ಮಾಡಿದ್ದೇವೆ ಎನ್ನುವುದೆಲ್ಲಾ ಬರೀ ಸುಳ್ಳು ಎಂದು ಸ್ಪಷ್ಟಪಡಿಸಿದರು. ಇನ್ನು ಮುಡಾಗೆ ಸಿಎಂ ಸಿದ್ದರಾಮಯ್ಯ ಒಳ್ಳೆಯ ಅಧಿಕಾರಿಯನ್ನೇ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಿದ್ದಾರೆ. ಈ ಮೂಲಕ ಮುಡಾ ಶುದ್ಧೀಕರಣ ಮಾಡುವ ಕೆಲಸ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.