ಮೈಸೂರು: ಇತ್ತೀಚೆಗೆ ಕೊ-ಆಪರೇಟಿವ್ ಬ್ಯಾಂಕ್ ಗಳು ಹೆಚ್ಚು ಹೆಚ್ಚು ಪ್ರಾರಂಭವಾಗುತ್ತಿವೆ. ಆದರೆ ಅದರ ಆಶಯಗಳನ್ನು ಈಡೇರಿಸುವತ್ತ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ವಿಫಲವಾಗುತ್ತಿವೆ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾರಣ್ಯಪುರಂನಲ್ಲಿ ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ನ ನೂತನ ಫ್ರಾಂಚೈಸಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳ ನೀತಿ ನಿಯಮಗಳನ್ನು ಚೆನ್ನಾಗಿ ತಿಳಿದುಕೊಂಡು ಪಾರದರ್ಶಕತೆ ಮತ್ತು ಗ್ರಾಹಕ ಸ್ನೇಹಿಯಾಗಿ ಕೆಲಸ ನಿರ್ವಹಿಸಿದರೆ ಹೆಚ್ಚು ಷೇರುದಾರರು ಹಾಗೂ ಸದಸ್ಯರುಗಳನ್ನು ಆಕರ್ಷಿಸಬಹುದು. ಈ ನಿಟ್ಟಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್‌ಗಳು ಪಾರದರ್ಶಕ ಮತ್ತು ಗ್ರಾಹಕ ಸ್ನೇಹಿಯಾಗಿರಲಿ ಎಂದರು.
ಸಹಕಾರ ಸಂಘಗಳಿಗೆ ಸದಸ್ಯರು ಹೆಚ್ಚಾದಂತೆ ಬ್ಯಾಂಕಿನ ಆದಾಯ ಸಹ ಹೆಚ್ಚಾಗುತ್ತದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಸಾಲವನ್ನು ನೀಡಬಹುದು. ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ನೆಡೆಯಲು ಅವಕಾಶ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಆಡಳಿತ ಮಂಡಳಿಯವರು ಸಹ ಪಾರದರ್ಶಕತೆಯಿಂದ ಇದ್ದರೆ ಬ್ಯಾಂಕ್ ಸಹ ಬೆಳೆಯುತ್ತದೆ. ಗ್ರಾಹಕರಿಗೂ ಹೆಚ್ಚು ಅನುಕೂಲಗಳು ಸಿಗುತ್ತದೆ. ಪ್ರಗತಿ ಕೊ-ಆಪರೇಟಿವ್ ಬ್ಯಾಂಕ್ ಸಹ ಎತ್ತರಕ್ಕೆ ಬೆಳೆಯಲಿ ಹೆಚ್ಚು ಹೆಚ್ಚು ಉಪಶಾಖೆಗಳನ್ನು ತೆರೆದು ವಿಸ್ತಾರವಾಗಿ ಬೆಳೆದು ಸಮಾಜಕ್ಕೆ ಉತ್ತಮ ಸೇವೆ ನೀಡಲಿ ಎಂದು ಇದೇ ವೇಳೆ ಶುಭಕೋರಿದರು.
ಈ ಸಂಧರ್ಭದಲ್ಲಿ ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ರವಿಕುಮಾರ್, ಉಪಾಧ್ಯಕ್ಷರಾದ ಕೃಷ್ಣಕುಮಾರ್, ನಿರ್ದೇಶಕಿಯವರಾದ ತೇಜಾವತಿ, ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ್(ಪ್ರಮಥಿ), ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಲೋಕೇಶ್, ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷರಾದ ಪ್ರತಿಧ್ವನಿ ಪ್ರಸಾದ್, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ರಮೇಶ್ ರಾವ್, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಸುನೀಲ್, ಶೋಭಾ ಸುನೀಲ್, ಮುಖಂಡರುಗಳಾದ ರವಿಶಂಕರ್, ಶಂಕರ್, ಯುವ ಮುಖಂಡರಾದ ರಾಕೇಶ್, ವಕೀಲರಾದ ಅಶ್ವಿನಿ ಉಪಸ್ಥಿತರಿದ್ದರು.