ಮೈಸೂರು: ಸಿದ್ದರಾಮಯ್ಯರಂತಹ ಅದೃಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ. ಅವರ ರಾಜಕೀಯ ಭವಿಷ್ಯ, ಅದೃಷ್ಟ ತುಂಬಾ ಗಟ್ಟಿಯಾಗಿದೆ ಎಂದು ಸಿದ್ದರಾಮಯ್ಯ ಪರ ಮತ್ತೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಇಂದು (ಫೆ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಫ್‌ಐಆರ್ ಅದ ತಕ್ಷಣ ವಿರೋಧ ಪಕ್ಷದವರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು. ಈಗ ನೋಡಿ ಲೋಕಾಯುಕ್ತದಿಂದ ಕ್ಲೀನ್‌ಚಿಟ್ ಸಿಕ್ಕಿದೆ. ಎಫ್‌ಐಆರ್ ಅದ ತಕ್ಷಣ ರಾಜೀನಾಮೆ ಕೇಲುವುದು ತಪ್ಪು ಎಂದು ಹೇಳಿದೆ. ಈಗ ಸತ್ಯ ಗೊತ್ತಾಗಿರಬಹುದು ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಮ್ಮ ಅವರ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿ, ಪಾರ್ವತಮ್ಮ ಅವರು ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ, ವ್ಯವಹಾರ ಮಾಡಿದವರೂ ಅಲ್ಲ. ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಮುಂದುವರಿದು ಮಾತನಾಡುತ್ತಾ, ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಉತ್ತಮವಾಗಿ ಕೆಲಸ ಮಾಡಿದೆ. ಲೋಕಾಯುಕ್ತರ ಮೇಲೆ ಯಾರು ಪ್ರಭಾವ ಬೀರುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದರ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಅದರೆ, ಅದು ಯಾವಾಗ ಅಂತ ಗೊತ್ತಿಲ್ಲ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂದರೆ ಸಿದ್ದರಾಮಯ್ಯ ಅವರ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರು ಸಿಎಂ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.





