ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮೋದಿ ಸರ್ಕಾರಕ್ಕೆ ಝೀರೋ ಮಾರ್ಕ್ಸ್ ಕೊಡುತ್ತೇನೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೋದಿ ಅವರು ಕೇವಲ ಪ್ರಚಾರದಿಂದ ಅಧಿಕಾರಕ್ಕೆ ಬಂದಿದ್ದು. ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಅದು ಏನ್ ಆಯ್ತು. ರೈತರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಹೇಳಿದ್ದರು. ರೈತರೆಲ್ಲ ದೆಹಲಿಗೆ ಹೋಗಿ ಯಾಕೆ ಚಳುವಳಿ ಮಾಡಿದ್ರು. ಮೋದಿ ಅವರು ಏನು ಹೇಳಿದ್ರು ಅದನ್ನೆಲ್ಲ ಮಾಡಿಲ್ಲ. 11 ವರ್ಷ ತುಂಬಿಸಿದ್ದಾರೆ ಅಷ್ಟೇ. ಪ್ರಚಾರದಿಂದ ಸುಳ್ಳು ಹೇಳಿಕೆ ನೀಡುತ್ತಾರೆ. ಗ್ಯಾರಂಟಿ ಘೋಷಣೆ ಮಾಡಿದಾಗ ನಮ್ಮನ್ನು ವಿರೋಧ ಮಾಡಿದ್ರು. ಆಮೇಲೆ ನಮ್ಮನ್ನು ಕಾಪಿ ಮಾಡಿದ್ರು. ಮಧ್ಯಪ್ರದೇಶ, ದೆಹಲಿ, ಯುಪಿ ಎಲ್ಲಾ ಕಡೆ ನಮ್ಮ ಗ್ಯಾರಂಟಿ ಕಾಪಿ ಆಯ್ತು ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಆದರೂ ಬಿಜೆಪಿಯವರು ಏನು ಪ್ರಶ್ನೆ ಮಾಡುತ್ತಿಲ್ಲ. ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಅದನ್ನ ಕೇಳಿ ಅಂದ್ರೆ ಬಿಜೆಪಿಯವರು ಕೆಲಸಕ್ಕೆ ಬಾರದ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.





