ಮೈಸೂರು: ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಮಧ್ಯೆಯೇ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವುದರಲ್ಲಿ ತಪ್ಪೇನಿದೆ ಎಂದು? ಸಿಎಂ ಸಿದ್ದಾರಮಯ್ಯ ಪರ ಮಾಜಿ ಸಂಸದ ಪ್ರತಾಪ್ ಸಿಂಹ ಬ್ಯಾಟಿಂಗ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ಸದ್ಭಾವನ ಯುವಕರ ಸಂಘದ ವತಿಯಿಂದ ನಗರದ ಚಿಕ್ಕಗಡಿಯಾರದ ಆವರಣದಲ್ಲಿ ಇಂದು(ಡಿಸೆಂಬರ್.25) ಮೈಸೂರು ಮುಖ್ಯ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ಮೈಸೂರಿನ ಸುಪುತ್ರನಾಗಿದ್ದು, ಎರಡೂ ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಮೈಸೂರಿಗೆ ಹಲವು ಬಾರಿ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಮಾಡಬಾರದು. ಈ ವಿಚಾರಕ್ಕೆ ವಿರೋಧ ಮಾಡುತ್ತಿರುವುದನ್ನು ನೋಡಿದರೆ, ಮೊಸರಲ್ಲಿ ಕಲ್ಲು ಹುಡುಕುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ರಸ್ತೆಗಳಿಗೆ ಕವಿಗಳು ಮತ್ತು ಸಾಧಕರ ಹೆಸರನ್ನು ನಾಮಕರಣ ಮಾಡುವುದು ವಾಡಿಕೆಯಾಗಿದೆ. ಅಂತೆಯೇ ಮೈಸೂರಿಗೆ ಆಶ್ರಯಧಾತರಾಗಿರುವ ಚಾಮರಾಜ ಒಡೆಯರ್, ನಾಲ್ವಡೀ ಕೃಷ್ಣರಾಜ ಒಡೆಯರ್ ಹಾಗೂ ದಿವಾನರ ಹೆಸರುಗಳನ್ನಿಟ್ಟಿದ್ದಾರೆ. ಇವರಂತೆಯೇ ಸಿದ್ದರಾಮಯ್ಯ ಅವರು ಸಹ ತಮ್ಮ ನಾಲ್ವತ್ತು ವರ್ಷದ ರಾಜಕೀಯ ಜೀವನದಲ್ಲಿ ಮೈಸೂರಿಗೆ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡುವ ವೇಳೆ ಮಾಜಿ ಶಾಸಕ ಪಿ.ವಾಸು ಹಾಗೂ ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಾಗಿದೆ. ಹೀಗಾಗಿ ಸಿದ್ದರಾಮಯ್ಯ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆ ಯಾರು ಆಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ನಾನು ಸೈದ್ಧಾಂತಿಕವಾಗಿ ಇವತ್ತಿಗೂ ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತೇನೆ. ಆದರೆ, ಸಾಧಕರನ್ನು ಗುರುತಿಸುವ ವಿಚಾರಲ್ಲಿ ಅಲ್ಲ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಎಂಬ ಪಕ್ಷ ಭೇದ ಬೇಡ. ಹಾಗಾಗಿ ಮೈಸೂರು ಹೃದಯ ಭಾಗದಲ್ಲಿರುವ ಒಂಟಿಕೊಪ್ಪಲ್‌ನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ರಾಯಲ್ ಇನ್ ಹೊಟೇಲ್‌ವರೆಗಿನ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡಲು ಸಾಧನೆಗೆ ಪಕ್ಷ ತರಬೇಡಿ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು
ಇದೇ ಸಂದರ್ಭದಲ್ಲಿ ಸಿ.ಟಿ.ರವಿ ಪ್ರಕರಣ ಬಗ್ಗೆ ಮಾತನಾಡಿದ ಅವರು, ಸದನದ ಪ್ರಾಂಗಣದಲ್ಲಿ ನಡೆಯುವ ಚುಟುವಟಿಕೆಗಳು, ಘಟನೆಗಳು ಹಾಗೂ ವಾಕ್ ಯುದ್ಧಗಳಿಗೆ ತೀರ್ಮಾನ ಕೊಡುವವರು ಸಭಾಪತಿಯಾಗಿರುತ್ತಾರೆ. ಆದರೆ ಈ ಪ್ರಕರಣ ದ್ವೇಷದ ರಾಜಕಾರಣ ಎಂಬಂತೆ ಕಾಣುತ್ತಿದೆ. ಇದೊಂದು ಪ್ರಕರಣ ಮುಂದಿನ ದಿನಗಳಲ್ಲಿ ಕೆಟ್ಟ ರಾಜಕಾರಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಪ್ರಬುಧ್ಧರಾಗಿರುವ
ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ಸಭಾಧ್ಯಕ್ಷರಿಗೆ ನಿರ್ಧಾರ ಮಾಡಲು ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.





