Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಿಎಂ ಸಿದ್ದರಾಮಯ್ಯ ನನಗೆ ಹೈಕಮಾಂಡ್‌. ಅವರಿಗೆ ದ್ರೋಹ ಮಾಡಿಲ್ಲ: ಮುಡಾ ಅಧ್ಯಕ್ಷ ಕೆ.ಮರೀಗೌಡ

ಮೈಸೂರು: ನನಗೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌. ನನ್ನ ಮನೆದೇವರ ಆಣೆಯಾಗಲು ಯಾರಿಗೂ ದ್ರೋಹ ಮಾಡಿಲ್ಲ. ಆದರೆ, ನಾನು ಮುಡಾ ಅಧ್ಯಕ್ಷ ಆದ ಮೇಲೆ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂಬಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನ ಮೇಲೆ ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಘೇರಾವ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ 50:50 ಅನುಪಾತದ ಬದಲಿ ನಿವೇಶನವನ್ನು ಮಾಡಬೇಡಿ ಎಂದು ಮುಡಾ ಆಯುಕ್ತರಿಗೆ ಆದೇಶ ನೀಡಿದ್ದೆ. ಆದರೆ, ಆಯುಕ್ತರು ಯಾರ ಮಾತು ಕೇಳದೆ 50:50 ಅನುಪಾತದ ಬದಲಿ ನಿವೇಶನವನ್ನು ಜಾರಿಗೆ ತಂದಿದ್ದಾರೆ ಎಂದು ಮುಡಾ ಆಯುಕ್ತರ ವಿರುದ್ಧವೇ ಆರೋಪಿಸಿದ್ದಾರೆ.

ನಾನು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ಅವರ ಆಹ್ವಾನದ ಮೇರೆಗೆ ವಿಮಾಣ ನಿಲ್ದಾಣಕ್ಕೆ ಹೋಗಿದ್ದೆ. ಕಾರ್ಯಕರ್ತ ಭಾಸ್ಕರ್‌ ನಿನ್ನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ ಎಂದು ಕೂಗಾಡಿ ಹೊಡೆಯಲು ಬಂದಿದ್ದರು. ಆ ಘಟನೆ ನನಗೆ ಬಹಳ ನೋವು ತಂದಿದೆ. 2024ರ ಮಾರ್ಚ್‌ ತಿಂಗಳಲ್ಲಿ ಸಿದ್ದರಾಮಯ್ಯ ಅವರು ನನ್ನನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ನಾನು ಅಧಿಕಾರ ವಹಿಸಿಕೊಂಡಾಗ ತುಂಡು ಭೂಮಿ ಉಳಿಸಲು ಪ್ರಯತ್ನ ಮಾಡಿದ್ದೇನೆ. ಶಾಸಕ ಕೆ.ಹರೀಶ್‌ಗೌಡ ಅವರ ಆದೇಶದ ಮೇರೆಗೆ ಮಾರಗೌಡನಹಳ್ಳಿಯ ಸರ್ವೆ ನಂ.77, 57ರ 8 ಎಕರೆ ಜಾಗಕ್ಕೆ ನಿವೇಶನ ನೀಡಿದ್ದಾರೆ. ಇದರಲ್ಲಿ ನಾನು ಯಾವ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2020ರಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಆದರೆ ಇದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಆರ್‌ಐಟಿ ಕಾರ್ಯಕರ್ತರೂ ಯಾಕೆ ಪ್ರಶ್ನಿಸಲಿಲ್ಲ. ಸಿಎಂ ಸಿದ್ದರಾಮಯ್ಯ 40 ವರ್ಷದಿಂದಲೂ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ಅವರು ನನಗೆ ನನ್ನ ಮನೆ ದೇವರು ಇದ್ದ ಹಾಗೆ. ನಾನು ಯಾವ ತಪ್ಪು ಮಾಡಿಲ್ಲ. ಅಲ್ಲದೇ ನನಗೆ 73 ವರ್ಷ ವಯಸ್ಸಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ. ಈ ಮಧ್ಯೆ ಬೇರೆ ಪಕ್ಷದವರು ನನ್ನನ್ನು ಆರೋಪಿಸುವುದಲ್ಲದೇ, ನನ್ನ ಪಕ್ಷದವರೇ ನನ್ನ ವಿರುದ್ಧ ಮಾತಾಡುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು. ನಾನು ಪಕ್ಷಕ್ಕೆ ದುಡಿದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

Tags: