Mysore
28
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಮುಡಾ ಕೇಸ್‌ನಲ್ಲಿ ಸಿಎಂʼಗೆ ನಿರಾಳ : ʻಸತ್ಯ ಮೇವ ಜಯತೆʻ ಫ್ಲೇ ಕಾರ್ಡ್‌ ಹಿಡಿದು ಕಾಂಗ್ರೆಸ್‌ ಸಂಭ್ರಮ

ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್ ಸಲ್ಲಿಸಿರುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುರಸ್ಕರಿಸಿರುವ ಹಿನ್ನಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದ ಲೋಕಾಯುಕ್ತ ಕಚೇರಿ ಮುಂದೆ ‘ಸತ್ಯ ಮೇವ ಜಯತೆ’ ಪ್ಲೇ ಕಾರ್ಡ್ ಹಿಡಿದು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸಿ.ಎಂ.ಸಿದ್ದರಾಮಯ್ಯ ವಿರುದ್ಧ ಕಿಡಿಗೇಡಿಗಳು ಹುನ್ನಾರ ಮಾಡಿದರು. ಜಮೀನು ಕಳೆದುಕೊಂಡು ಸಿದ್ದರಾಮಯ್ಯ ಕುಟುಂಬ ಮುಡಾದಿಂದ ನಿವೇಶನ ಪಡೆದಿರುವುದನ್ನೇ ಅಕ್ರಮವೆಂದು ಸ್ನೇಹಮಯಿ ಕೃಷ್ಣ ಹಾಗೂ ಅಬ್ರಹಾಂ ರಾಜ್ಯಪಾಲರಿಂದ ಅನುಮತಿ ಪಡೆದು ಕೇಸ್ ಹಾಕಿದರು. ಸ್ನೇಹಮಯಿ ಕೃಷ್ಣಗೆ ಇಡೀ ಬಿಜೆಪಿ ಸಂಪೂರ್ಣ ಬೆಂಬಲ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಡಲಾದ ಆರೋಪ ಮತ್ತು ಷಡ್ಯಂತ್ರಗಳು ಸುಳ್ಳಾಗಿದ್ದು, ಸತ್ಯಕ್ಕೆ ಜಯ ಸಂದಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬದ ಸದಸ್ಯರು ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ ಎಂಬುವುದು ಸಾಬೀತಾಗಿದೆ ಎಂದು ತಿಳಿಸಿದರು.

ಮುಡಾದಲ್ಲಿ 50:50 ನಿವೇಶನ ಹಂಚಿಕೆಯಲ್ಲಿ ಹಗರಣವಾಗಿದೆ. ಇದರಲ್ಲಿ ಸಿಎಂ ಭಾಗಿಯಾಗಿದ್ದಾರೆ, ಹತ್ತಾರು ಕೋಟಿ ರೂ. ಹಗರಣವಾಗಿದೆ ಎಂದು ದೂರಲಾಗಿತ್ತು. ರಾಜ್ಯಪಾಲರ ಅನುಮತಿ ಪಡೆದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸದರಿ ಹಗರಣದಲ್ಲಿ ಸಿಎಂ ಮತ್ತು ಕುಟುಂಬ ಭಾಗಿಯಾಗಿಲ್ಲ, ಅವರ ಪ್ರಭಾವವೂ ಇಲ್ಲ ಎಂದು ಬಿ ರಿಪೋರ್ಟ್ ಹಾಕಲಾಗಿತ್ತು. ಮತ್ತೆ ಲೋಕಾಯುಕ್ತ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಜನಪತ್ರಿನಿಧಿಗಳ ವಿಶೇಷ ಕೋರ್ಟ್ ಮೊರೆ ಹೋಗಲಾಗಿತ್ತು. ಈಗ ಕೋರ್ಟ್ ಲೋಕಾಯುಕ್ತ ಪೊಲೀಸರ ವರದಿ ಪುರಸ್ಕರಿಸಿದೆ ಎಂದು ಹೇಳಿದರು.

ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ ಸ್ನೇಹಮಯಿ ಕೃಷ್ಣ , ಸಾವಿರಾರು ಕೋಟಿ ರೂ. ಹಗರಣ ಎಂದು ಸುಳ್ಳು ಹೇಳಿದರು. ಇದೀಗ ಸತ್ಯ ಹೊರಗಡೆ ಬಂದಿದೆ. ಸತ್ಯಮೇವ ಜಯತೆ, ಸತ್ಯಕ್ಕೆ ಜಯ ಎಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳೆದ 2 ವರ್ಷಗಳಲ್ಲಿ ಮೈಸೂರಿಗೆ ಒಂದೇ ಒಂದು ಯೋಜನೆ ತಂದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಂಡು ಜನ ವೋಟ್ ಹಾಕಿದ್ದಾರೆ. ಕುಶಾಲನಗರಕ್ಕೆ ರೈಲು ತರುವುದಾಗಿ ಹೇಳಿದ್ದರು. ಈಗ ರಾಜ್ಯ ಸರಕಾರ ಸಹಕರಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಷಡ್ಯಂತ್ರ ನಡೆಸಿದವರಿಗೆ ಧಿಕ್ಕಾರ, ಸತ್ಯ ಮೇವ ಜಯತೆ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಭಾಸ್ಕರ್, ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:
error: Content is protected !!