ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಸಂಭವಿಸಲು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರೇ ನೇರ ಕಾರಣ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಹಾಗು ಗೃಹಸಚಿವರೇ ನಿಮ್ಮ ಕೈಯ್ಯಲ್ಲಿ 11 ಜನರ ಸಾವಿನ ರಕ್ತವಿದೆ. ಈ ಸಾವುಗಳಿಗೆ ನೀವೇ ನೇರ ಹೊಣೆ. ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಐಪಿಎಲ್ ಮ್ಯಾಚ್ ಗೆದ್ದಿರುವುದು ಒಂದು ದೊಡ್ಡ ಶಾಪ. ಗೆದ್ದ ಮೇಲೆ ಅದನ್ನ ಹೇಗೆ ವಿಜೃಂಭಣೆಯಿಂದ ಆಚರಿಸಬೇಕಿತ್ತು? ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಮಾಡಿದ್ದು ಸರಿಯಲ್ಲ. ಆರ್‌ಸಿಬಿ ಟೀಂ ಹೈಜಾಕ್ ಮಾಡಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ.
ಡಿಪಿಆರ್ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದ್ರು. ಹೈಕೋರ್ಟ್ ನಿರ್ದೇಶಕ ಉಲ್ಲಂಘಿಸಿ ಕಾರ್ಯಕ್ರಮ ಮಾಡಿದ್ದಾರೆ. ಬೆಂಗಳೂರಿನಲ್ಲಿ ಏಳು ಏಜೆನ್ಸಿಗಳದ್ದೂ ತಪ್ಪಿದೆ. ಪರಸ್ಪರ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದೆ ಕಾರ್ಯಕ್ರಮ ಯಡವಟ್ಟಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮ ನಡೆಸಿ ಮರುದಿನ ಕಾರ್ಯಕ್ರಮ ನಡೆಸಿದ್ದು ತಪ್ಪು. ಇಂಟೆಲಿಜೆನ್ಸ್ ಫೇಲ್ ಆದಮೇಲೆ ಲಾ ಅಂಡ್ ಆರ್ಡರ್ ಆದ್ರೂ ಕಾರ್ಯನಿರ್ವಹಿಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದ ಅವರು, ಆರ್‌ಸಿಬಿ ಕರ್ನಾಟಕ, ಭಾರತ ತಂಡವಲ್ಲ. ಇದೊಂದು ಖಾಸಗಿ ಕ್ಲಬ್ ಹರಾಜು ಹಾಕಿ ಖರೀದಿಸಿರುವ ತಂಡ. ನಾವು ಸಮವಸ್ತ್ರ ಹಾಕಿದ ಮೇಲೆ ದೊರೆ ವಿರುದ್ಧ ಮಾತನಾಡಲ್ಲ. ದೊರೆ ಕೊಟ್ಟ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.





