ಮೈಸೂರು : ಸ್ವಚ್ಛತೆಗೆ ಸಂಬಂಧಿಸಿದಂತೆ ಮತ್ತೆ ಒಂದನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರಪಾಲಿಕೆ ವತಿಯಿಂದ ಫೆ.8 ರಂದು ಸ್ವಚ್ಛತಾ ಓಟ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.
ಸೋಮವಾರ ನಗರಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಓಡೋಣ ಮೈಸೂರಿಗಾಗಿ-ಒಂದಾಗೋಣ ಸ್ವಚ್ಛತೆಗಾಗಿ’ ಎಂಬ ಘೋಷವ್ಯಾಕ್ಯದಡಿ ಈ ಮ್ಯಾರಥಾನ್ ಓಟ ಆಯೋಜಿಸಲಾಗಿದೆ ಎಂದರು.
3 ಕಿಮೀ, 5 ಕಿಮೀ ಹಾಗೂ 10 ಕಿಮೀ ಎಂಬ ಮೂರು ವಿಭಾಗಗಳಲ್ಲಿ ಓಟ ನಡೆಯಲಿದೆ. 18 ರಿಂದ 40 ವರ್ಷ ವಯಸ್ಸಿನ ಹಾಗೂ 40 ವರ್ಷಕ್ಕಿಂತ ಮೆಲ್ಪಟ್ಟವರ ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದು. ಇದರೊಂದಿಗೆ ವಿಶೇಷ ವರ್ಗದ ಗುಂಪನ್ನೂ ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಫೆ.8 ರಂದು ಬೆಳಿಗ್ಗೆ 6 ಗಂಟೆಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮ್ಯಾರಥಾನ್‌ಗೆ ಚಾಲನೆ ನೀಡಲಾಗುತ್ತದೆ. ಮೂರು ಕಿಮೀ ದೂರದ ಓಟವು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಕೆ.ಆರ್.ವೃತ್ತ, ಎಂಸಿಸಿ, ಬಸವೇಶ್ವರ ವೃತ್ತ, ಹಾರ್ಡಿಂಜ್ ವೃತ್ತ, ದೊಡ್ಡಗಡಿಯಾರದ ಮೂಲಕ ಬಂದು ಟೌನ್‌ಹಾಲ್ ಬಳಿ ಸಮಾಪ್ತಿಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
5 ಕಿಮೀ ಓಟವು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾಗಿ ದೊಡ್ಡ ಗಡಿಯಾರ, ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ನೂರಡಿ ರಸ್ತೆ, ಬಸವೇಶ್ವರ ವೃತ್ತ, ಹಾರ್ಡಿಂಜ್ ವೃತ್ತದ ಮೂಲಕ ಪುರಭವನ ಆವರಣದಲ್ಲಿ ಮುಕ್ತಾಯವಾಗಲಿದೆ ಎಂದರು. ಅದೇ ರೀತಿ 10 ಕಿಮೀ, 5 ಕಿಮೀ ಓಟದ ಹಾದಿಯಲ್ಲೇ ಎರಡು ಬಾರಿ ಕ್ರಮಿಸಬೇಕು ಎಂದು ತಿಳಿಸಿದರು.
ಓಟದಲ್ಲಿ ಭಾಗವಹಿಸುವವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಇದಕ್ಕಾಗಿ 1.44 ಲಕ್ಷ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಸ್ವಚ್ಛತಾ ಓಟವನ್ನು ಆಯೋಜನೆ ಮಾಡಲು ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಅಲ್ಲದೇ ಅಗತ್ಯ ಸೌಲಭ್ಯಗಳನ್ನು, ಮುಂಜಾಗ್ರತಾ ಕ್ರಮಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಮೊದಲ ಸ್ಥಾನಕ್ಕೆ ಯತ್ನ
ನಗರವನ್ನು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಗಿದೆ. ಮುಂದೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಸ್ವಚ್ಛತೆಗಾಗಿ ಎರಡು ಪಾಳಿಗಳಲ್ಲಿ ಕಸ ಸಂಗ್ರಹವನ್ನು ಮಾಡಲಾಗುತ್ತಿದೆ. ಮಧ್ಯಾಹ್ನದ ವೇಳೆ ವಾಣಿಜ್ಯ ಚಟುವಟಿಕೆಗಳು ನಡೆಯುವ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕ್ರಮವನ್ನು ಶೀಘ್ರದಲೇ ಅನುಷ್ಠಾನ ಮಾಡಲಾಗುತ್ತದೆ. ಇದರ ಸಾಧಕ-ಬಾಧಕ ನೋಡಿಕೊಂಡು ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಯೋಗಾತ್ಮ ಶ್ರೀಹರಿ, ಉಪ ಆಯುಕ್ತ ಸೋಮಶೇಖರ್, ಸ್ವಚ್ಛ ಭಾರತ್ ಅಭಿಯಾನದ ನೊಡಲ್ ಅಧಿಕಾರಿ ಮೃತ್ಯುಂಜಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




