ಮೈಸೂರು: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ (CET Examination Center) ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಮೈಸೂರಿನಲ್ಲಿಂದು (Mysuru) ಜಿಲ್ಲಾ ಬ್ರಾಹ್ಮಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಕಟ್ ಮಾಡಿ ಬಿಸಾಕಿದ ಪ್ರಕರಣ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಪ್ರಕರಣ ಖಂಡಿಸಿ ಬ್ರಾಹ್ಮಣ ವೇದಿಕೆ ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಜಿಲ್ಲಾ ಬ್ರಾಹ್ಮಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಅಗ್ರಹಾರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ, ಪರೀಕ್ಷಾ ಸಿಬ್ಬಂದಿಗಳ ವಿರುದ್ಧ ಪ್ರತಿಭಟನಾಕಾರರು ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:- ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್: ಕೂದಲೆಳೆ ಅಂತರದಲ್ಲಿ ಪಾರು
ಈ ವೇಳೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ನಮಗೆ ಜನಿವಾರ ಅತ್ಯಂತ ಮಹತ್ವ ಮೌಲ್ಯವಾದದ್ದು. ಈ ಮೂಲಕ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ಜನಗಣತಿಯಲ್ಲಿ ಬ್ರಾಹ್ಮಣರನ್ನು ಕೇವಲ 16% ಇದ್ದಾರೆ ಎಂದು ತೋರಿಸಿದ್ದಾರೆ. ಜನಿವಾರದ ವಿಚಾರದಲ್ಲಿ ಸರ್ಕಾರ ಕ್ಷಮೆಯನ್ನು ಕೂಡ ಯಾಚಿಸಿಲ್ಲ. ಕೇವಲ ವಿಷಾದಿಸಿದೆ ಅಷ್ಟೇ. ಜನಿವಾರ ತೆಗೆಸಿ ಅಪಮಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಅಂಕ ನೀಡಿ ಸರ್ಕಾರಿ ಕಾಲೇಜಿನಲ್ಲಿ ಸೀಟ್ ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ಕೃಷ್ಣರಾಜ ಪೊಲೀಸ್ ಠಾಣೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು, ಜನಿವಾರ ತೆಗೆಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರು.





