ಮೈಸೂರು: ಸಿ.ಟಿ.ರವಿ ತಪ್ಪು ಮಾಡಿದ್ದರೆ ಸಭಾಪತಿಗಳು ಶಿಕ್ಷೆಯ ಬಗ್ಗೆ ತೀರ್ಮಾನ ಮಾಡಬೇಕು. ಆದರೆ ರಾಜ್ಯದಲ್ಲಿ ಆ ದಿನ ಸಿ.ಟಿ.ರವಿ ಅವರನ್ನು ಆ ರೀತಿ ನಡೆಸಿಕೊಂಡಿರುವುದು ತಪ್ಪು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಅಸಂವಿಧಾನಿಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಎಂಎಲ್‌ಸಿ ಸಿ.ಟಿ.ರವಿ ತಪ್ಪು ಮಾಡಿದ್ದರೆ ಸಭಾಪತಿಗಳೇ ಶಿಕ್ಷೆಯ ಬಗ್ಗೆ ನಿರ್ಧಾರ ಮಾಡಬೇಕು. ಆದರೆ ಕಾಂಗ್ರೆಸ್ ನಾಯಕರು ಮಾಡಿದ್ದೇನು ಎಂದು ಪ್ರಶ್ನೆ ಮಾಡಿದರು.
ಸಿ.ಟಿ.ರವಿ ಅವರ ಬಂಧನದ ದಿನ ಮಾಧ್ಯಮಗಳು ಇರದಿದ್ದರೆ ರವಿ ಅವರ ಕಥೆ ಏನಾಗ್ತಿತ್ತೋ ಏನೋ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ ಮುಂದುವರಿದಿದೆ. ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.