ಪ್ರಶಾಂತ್ ಎನ್ ಮಲ್ಲಿಕ್
ಮೈಸೂರು: ಹಣಕಾಸಿನ ಕೊರತೆಯಿಂದ ರಾಜ್ಯ ಸಂಪೂರ್ಣ ದಿವಾಳಿಯತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹಗರಣಗಳು ನಡೆಯುತ್ತಲೇ ಇವೆ. ಇದನ್ನು ಖಂಡಿಸಿ ಇಂದಿನಿಂದ ಮೇ.3ರವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ರಾಜ್ಯ ಸರ್ಕಾರದಿಂದ ಮುಸ್ಲಿಂಮರ ತುಷ್ಟಿಕರಣವಾಗುತ್ತಿದೆ. ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿರುವುದರ ಬಗ್ಗೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಧರ್ಮಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಹಣಕಾಸಿನ ಕೊರತೆಯಿಂದ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಜನಸಾಮಾನ್ಯರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.





