ಪ್ರಶಾಂತ್ ಎನ್ ಮಲ್ಲಿಕ್
ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ 36 ವರ್ಷದ ರವಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಗಾಯಾಳು ರವಿಯ ಚಿಕಿತ್ಸೆಗೆ ತುರ್ತು ಆರ್ಥಿಕ ನೆರವು ಒದಗಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದ ನಿವಾಸಿಯಾಗಿರುವ ರವಿ ಅವರು, ಸುತ್ತೂರು ಜಾತ್ರೆಯಲ್ಲಿ ಸೆಕ್ಯೂರಿಟಿ ಕೆಲಸ ಮುಗಿಸಿ, ಅದೇ ಗ್ರಾಮದ ಪ್ರದೀಪ್ ಅವರೊಂದಿಗೆ ರಸ್ತೆ ಬದಿಯ ಗದ್ದೆಯಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ಮಲಗಿದ್ದವರ ಮೇಲೆ ಹರಿಸಿದ್ದಾನೆ. ಪರಿಣಾಮ ಪ್ರದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ರವಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಡ ಕುಟುಂಬಕ್ಕೆ ಸೇರಿದ ರವಿಯೇ ಕುಟುಂಬದ ಏಕೈಕ ಆಸರೆಯಾಗಿದ್ದು, ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗಾಯಾಳು ರವಿಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಮಾಜದ ದಾನಿಗಳು ತಕ್ಷಣ ಆರ್ಥಿಕ ನೆರವು ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.




