ಮೈಸೂರು: ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿಂದು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಇಬ್ಬರ ಬಂಧನಕ್ಕೆ ಬಿಜೆಪಿ ಪದೇ ಪದೇ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ಕಾಂಗ್ರೆಸ್ ಪಕ್ಷದ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಆದ್ದರಿಂದ ಅವರಿಬ್ಬರನ್ನು ಈಗಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಪ್ರಕರಣ ಸಂಬಂಧ ಆದಷ್ಟು ಬೇಗ ಇಬ್ಬರ ಬಂಧನವಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.



