ಮೈಸೂರು: ಕಳೆದ ಕೆಲ ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಮೈಸೂರು ಮುಡಾ ಹಗರಣಕ್ಕೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ ಆಗುತ್ತಿದ್ದಂತೆ ಅರ್ಜಿದಾರ ಸ್ನೇಹಮಯಿ ಕೃಷ್ಣ, ಈ ಬಗ್ಗೆ ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಸುಪ್ರೀಂಕೋರ್ಟ್‌ಗೆ ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನನಗೆ ತಾವೆಲ್ಲರೂ ಪ್ರಶ್ನೆ ಮಾಡುತ್ತಿದ್ದದ್ದು ಸರಿಯಷ್ಟೆ. ಹೈಕೋರ್ಟ್ ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ, ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ, ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ ಹಿತೈಷಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತುಪಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದೆ ಎಂದು ಮಾಹಿತಿ ನೀಡಿದ್ದಾರೆ.





