ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಬಂಧನ ಹಾಗೂ ಬಿಡುಗಡೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್‌ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹುಣಸೂರಿನ ಹನುಮ ಜಯಂತಿ ಬೇಳೆ ನನಗೂ ಈ ರೀತಿಯ ಅನುಭವ ಆಗಿದೆ. ಜನಪ್ರತಿನಿಧಿಗಳು ಎಷ್ಟೋ ಬಾರಿ ಸಭ್ಯತೆ ಮೀರಿ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನವರು ಪಾಕ್ ಪರ ಘೋಷಣೆ ಕೂಗಿದಾಗ ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು ಏನು ಎಂದು ಪ್ರಶ್ನೆ ಮಾಡಿದರು.
ಇನ್ನು ಈ ವಿಚಾರದಲ್ಲಿ ಫಾರೆನ್ಸಿಕ್ ರಿಪೋರ್ಟ್ ಬರಲಿ, ಯಾರದ್ದು ತಪ್ಪು ಎಂಬುದು ಅಲ್ಲಿ ಗೊತ್ತಾಗಲಿದೆ. ಆ ನಂತರ ಸೂಕ್ತ ಕ್ರಮವಾಗಲಿ ಎಂದು ಒತ್ತಾಯಿಸಿದರು.
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಪೊಲೀಸರನ್ನು ಛೂಬಿಟ್ಟು ಈ ಕೆಲಸ ಮಾಡಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.