ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮುಂದಿನ ಶುಕ್ರವಾರದಿಂದ ಆಷಾಢ ಪೂಜೆಗಳು ಶುರುವಾಗಲಿವೆ.
ಚಾಮುಂಡಿ ಬೆಟ್ಟದಲ್ಲಿ ಮುಂದಿನ ಶುಕ್ರವಾರದಿಂದ ಆಷಾಢ ಪೂಜೆಗಳು ಶುರುವಾಗಲಿದ್ದು, ಇದಕ್ಕೆ ಮೈಸೂರು ಜಿಲ್ಲಾಡಳಿತ ಭರ್ಜರಿ ತಯಾರಿಗಳನ್ನು ನಡೆಸಿದೆ.
ಈ ಬಾರಿ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ವಿಶೇಷ ಪಾಸ್ ವಿತರಿಸದಿರಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಇಷ್ಟು ಮಾತ್ರವಲ್ಲದೇ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಕೂಡ ನಿರ್ಬಂಧಿಸಲಾಗಿದೆ.
ಈ ಎಲ್ಲಾ ಕ್ರಮಗಳನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯಿಸಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ಎಲ್ಲರೂ ಕೂಡ ಉಚಿತ ಬಸ್‌ನಲ್ಲೇ ಚಾಮುಂಡಿಬೆಟ್ಟಕ್ಕೆ ತೆರಳಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೂ ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳನ್ನು ಪೂಜಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಆಷಾಢ ಶುಕ್ರವಾರಗಳಂದು ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗುತ್ತದೆ.
ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕೆಲವು ಭಕ್ತರು ಮೆಟ್ಟಿಲುಗಳನ್ನು ಹತ್ತಿಕೊಂಡು ಬೆಟ್ಟಕ್ಕೆ ಹೋಗುತ್ತಾರೆ. ಇನ್ನೂ ಕೆಲ ಭಕ್ತರು ಬಸ್ಸಿನ ಮುಖಾಂತರವೇ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆಯ ದರ್ಶನ ಪಡೆಯಲಿದ್ದಾರೆ.





