ಮೈಸೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸ್ನೇಹಿತೆಯ ತಂಗಿಯ ಮಾತನ್ನು ನಂಬಿದ ವ್ಯಕ್ತಿಯೊಬ್ಬರು ಬರೋಬ್ಬರಿ 30 ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ರಾಘವೇಂದ್ರ ನಗರದ ನಿವಾಸಿಯೊಬ್ಬರಿಗೆ ಶ್ರುತಿ ಎಂಬವರ ಪರಿಚಯವಾಗಿದೆ. ಅವರ ಮೂಲಕ ಅವರ ತಂಗಿ ಲಾವಣ್ಯ ಎಂಬವರ ಪರಿಚಯವಾಗಿದೆ. ನಾನು ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದು, ನೀವು ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಹಣ ಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದಾರೆ.
ಆಕೆಯ ಮಾತನ್ನು ನಂಬಿದ ಅವರು ತಮ್ಮ ಖಾತೆ, ತಾಯಿ, ಸ್ನೇಹಿತರ ಖಾತೆಯ ಮೂಲಕ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ತೊಡಗಿಸಿದ್ದಾರೆ. ಆದರೆ, ಯಾವುದೇ ಲಾಭಾಂಶ ಬಂದಿಲ್ಲ. ಜೊತೆಗೆ ಅಸಲು ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಲಾವಣ್ಯ ಬಳಿ ಹಣಕ್ಕಾಗಿ ಒತ್ತಾಯಿಸಿದ ವೇಳೆ ನಾನು ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಬೆದರಿಸಿ ಕಳುಹಿಸಿದ್ದಾರೆ. ಈ ಸಂಬಂಧ ವ್ಯಕ್ತಿಯು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಂಬೈ ಪೊಲೀಸರ ಹೆಸರಿನಲ್ಲಿ ದೋಖಾ
ಮತ್ತೊಂದು ಪ್ರಕರಣದಲ್ಲಿ ನಾವು ಮುಂಬೈ ಪೊಲೀಸರು, ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದೀರಿ. ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕುವೆಂಪುನಗರ ನಿವಾಸಿಗೆ ಬೆದರಿಕೆ ಕರೆ ಬಂದಿದೆ. ನಂತರ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಕೆಲ ಸಮಯ ನಾವು ಹೇಳಿದ ಖಾತೆಗೆ ವರ್ಗಾಯಿಸಿ. ಪರಿಶೀಲನೆ ನಂತರ ವಾಪಸ್ ಹಾಕುತ್ತೇವೆ ಎಂದು ತಿಳಿಸಿ ಅವರ ಖಾತೆಯಲ್ಲಿದ್ದ 7.25 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.





