ಮೈಸೂರು: ಇಲ್ಲಿನ ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿಂದು ಭಾರತೀಯ ಸೇನೆಯನ್ನು ಬೆಂಬಲಿಸಿ ಬೃಹತ್ ರಕ್ತದಾನ ಶಿಬರವನ್ನು ಆಯೋಜನೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿತ್ತು. ಪರಿಣಾಮ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಿ ಇಂದು ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು. ರಕ್ತದಾನ ಶಿಬಿರದಲ್ಲಿ ಧರ್ಮಾತೀತವಾಗಿ ನೂರಾರು ಜನ ಭಾಗಿಯಾಗಿ ಸ್ವಯಂ ಪ್ರೇರಿತರಾಗಿ ರಕ್ತ ಕೊಟ್ಟು ದೇಶ ಪ್ರೇಮ ಮೆರೆದರು. ದೇಶಕ್ಕೆ ರಕ್ತ ಅಲ್ಲ ಪ್ರಾಣವನ್ನೇ ಕೊಡುತ್ತೇವೆ. ದೇಶ ನಮಗೆ ಎಲ್ಲವನ್ನೂ ಕೊಟ್ಟಿದೆ. ದೇಶಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೆಮ್ಮೆಯಿಂದ ಹೇಳಿದರು.





