ಮೈಸೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಮಾಸ್ಕ್‌ಮ್ಯಾನ್ ಚಿನ್ನಯ್ಯ ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದಾರೆ.
ಇನ್ನು 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಯಲ್ಲಿರುವ ಚಿನ್ನಯ್ಯನನ್ನು ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಚಾಕು ಸಿಕ್ಕಿದೆ. ಚಾಕು ಹಿಂದೆ ಇರುವ ಕೈ ಬಂಧಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಬಂಧನದಿಂದ ಎಲ್ಲಾ ಮುಗಿದಿಲ್ಲ. ಮಾಸ್ಕ್ ಮ್ಯಾನ್ ಇಲ್ಲಿ ಕೇವಲ ನೆಪ ಮಾತ್ರ. ಚಾಕು ಸಿಕ್ಕಿದೆ. ಈಗ ಚಾಕು ಹಿಂದೆ ಇರುವ ಕೈಯನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರ ಬಂಧನ ಆಗಬೇಕು ಎಂದು ಆಗ್ರಹಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾಳೆ ನೂರಾರು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್‌ನಿಂದ ರ್ಯಾಲಿ ಮಾಡಲಾಗುತ್ತದೆ. ಕಾರುಗಳಲ್ಲಿ ತೆರಳಿ ಮಂಜುನಾಥನ ದರ್ಶನ ಪಡೆಯುತ್ತೇವೆ. ಸಿಎಂ ಸಿದ್ದರಾಮಯ್ಯರ ಈ ಅವಧಿಯಲ್ಲಿ ಒಳ್ಳೆಯದಕ್ಕಿಂತಾ ಜನರಿಗೆ ಹೊರೆ ಹೆಚ್ಚಾಗುವ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.





