ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ಟೀಕೆ ಮಾಡಿದ್ದಾರೆ.
ಮೈಸೂರು ಪಾಲಿಕೆ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಶಿವಕುಮಾರ್ ಅವರು, ನಾನು ಮೇಯರ್ ಆಗಿದ್ದಾಗ ಪಾರಂಪರಿಕ ಕಮಾನುಗಳ ರಕ್ಷಣೆಗಾಗಿ 3 ಕೋಟಿ ರೂ ಅನುದಾನ ಮೀಸಲಿಟ್ಟಿದ್ದೆ. ಪಾರಂಪರಿಕ ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಿದರೂ ಅನುದಾನ ಬಳಕೆ ಆಗಲಿಲ್ಲ. ಮೈಸೂರು ಪಾರಂಪರಿಕ ನಗರ ಎಂದು ಪ್ರಸಿದ್ದಿಯಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳನ್ನು ಉಳಿಸುವುದು ಪಾಲಿಕೆಯ ಆದ್ಯತೆ ಕರ್ತವ್ಯ ಆಗಬೇಕಿತ್ತು. ವರ್ಷಕ್ಕೊಂದು ಪಾರಂಪರಿಕ ಕಟ್ಟಡ ಸಂರಕ್ಷಿಸಲು ಮುಂದಾಗಿದ್ದರೂ ಎಷ್ಟೋ ಅನುಕೂಲ ಆಗುತ್ತಿತ್ತು. ಆದರೆ ಇಡೀ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಸ್ತಾಪವೇ ಇಲ್ಲದ ಇರುವುದು ನಿರಾಸೆ ಮೂಡಿಸಿದೆ ಎಂದು ಹೇಳಿದರು.




