ಮೈಸೂರು: ಮೈಸೂರಿನ ಇತಿಹಾಸ ತಿರುಚುವವರಿಗೆ ಮುಂದೆ ಮಾರಿಹಬ್ಬ ಕಾದಿದೆ ಎಂದು ಮೈಸೂರು ನಗರ ಬಿಜೆಪಿ ವಕ್ತಾರ ಮೋಹನ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಈ ವಾರ ಒಂದು ರೀತಿಯಲ್ಲಿ ಹಾಸ್ಯಭರಿತ ವಾರವಾಗಿದೆ. ಕಾಂಗ್ರೆಸ್ ನಾಯಕರಾದ ಎಚ್.ಸಿ.ಮಹದೇವಪ್ಪ, ಯತೀಂದ್ರ ಹೇಳಿದ್ದನ್ನೆಲ್ಲಾ ಕಾಂಗ್ರೆಸ್‌ನವರು ಒಪ್ಪಿಕೊಳ್ಳುತ್ತಿದ್ದಾರೆ. ಆಡಳಿತ ಮಾಡುವವರು ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೇ ಅವಾಂತರಗಳು ಉಂಟಾಗುತ್ತವೆ. ಹೈದರಾಲಿ, ಟಿಪ್ಪು ಸುಲ್ತಾನ್ ಸುಮಾರು 40 ವರ್ಷಗಳ ಕಾಲ ಮಾತ್ರ ಆಳ್ವಿಕೆ ನಡೆಸಿದ್ದಾರೆ.
40 ವರ್ಷದಲ್ಲಿ ಇವರ ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ. ಕಾಂಗ್ರೆಸ್‌ನವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಇರಲಾಗಲ್ಲ. ಇತಿಹಾಸ ತಿರುಚುವ ಕೆಲಸವನ್ನು ಕಾಂಗ್ರೆಸ್‌ನವರು ಏಕೆ ಮಾಡುತ್ತಿದ್ದಾರೆ ಎಂದು ತಿಳಿಸಬೇಕು. ಹಾರಿಕೆಯ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಟಿಪ್ಪುವಿನ ಹೆಸರನ್ನು ಕಾಂಗ್ರೆಸ್ಸಿಗರು ಏಕೆ ಹೇಳುತ್ತಾರೆ. ಬೇಕಾಬಿಟ್ಟಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು. ಮೈಸೂರಿನ ಇತಿಹಾಸ ತಿರುಚುವವರಿಗೆ ಮುಂದೆ ಮಾರಿಹಬ್ಬ ಕಾದಿದೆ ಎಂದು ಎಚ್ಚರಿಕೆ ನೀಡಿದರು.





