ಮೈಸೂರು: ಜೆಡಿಎಸ್‌ನ 9 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ಈಗಾಗಲೇ ತಯಾರಿ ನಡೆಸಿದ್ದು, ಫೆಬ್ರವರಿ ವೇಳೆಗೆ ಅವರೆಲ್ಲಾ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗದ ಐವರು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಾಗಿರುವ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಫೆಬ್ರವರಿಯಲ್ಲಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಇನ್ನು ನಾವು ಪಕ್ಷ ಬಿಟ್ಟು ಬರುವುದಿಲ್ಲ ಅಂತ ಹೇಳಿದವರೆಲ್ಲಾ ಈಗ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ನಮಗೆ ಅವರ ಅವಶ್ಯಕತೆ ಇಲ್ಲ. ಆದರೆ ಅವರೇ ಈಗ ಬರುತ್ತೀವಿ ಎಂದು ದುಂಬಾಲು ಬಿದ್ದಿರುವುದರಿಂದ ನಾವು ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಇಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಮೈಸೂರಿನಲ್ಲಿ ʼದಿಶಾʼ ಸಭೆ ನಡೆಸುತ್ತಿರುವುದಕ್ಕೆ ಸ್ವಾಗತಿಸಿದರು. ಈ ಸಭೆಯ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ದಿಶಾ ಸಭೆ ಮಾಡುವುದು ಉತ್ತಮ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು.





