ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪ್ರೊ.ಭಾಷ್ಯಂ ಸ್ವಾಮೀಜಿ, ಬಿ.ಎಸ್.ನಾಗಭೂಷಣ ಅತ್ರಿ, ಬ್ರಹ್ಮಕುಮಾರಿ ಲಕ್ಷ್ಮೀ ಜೀ, ಡಾ.ಸಿ.ಸೋಮಶೇಖರ್, ಕೆ.ಬಿ.ಲಿಂಗರಾಜು, ಸತೀಶ್ ಕುಮಾರ್ ಡಿ. ಕಗ್ಗೆರೆ, ಶಿವಶಂಕರ ಟೋಕರೆ ಮತ್ತು ಎಸ್.ಶಿವಕುಮಾರ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
2021–22ನೇ ಜನವರಿಯಿಂದ 2023–24ರ ಜನವರಿ ಆವೃತ್ತಿಗೆ ಒಟ್ಟು 10,623 ಹಾಗೂ 2013-14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳ ಒಟ್ಟು 30,515 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.
2021–22ನೇ ಜನವರಿಯಿಂದ 2023–24ರ ಜನವರಿವರೆಗೆ 14,069 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 10,623 ಮಂದಿ ತೇರ್ಗಡೆಯಾಗಿದ್ದು, ಶೇ 75.50ರಷ್ಟು ಫಲಿತಾಂಶ ಬಂದಿದೆ.
ಇವರಲ್ಲಿ 3,987 ಪುರುಷರು ಹಾಗೂ 6,704 ಮಹಿಳೆಯರಿದ್ದು, 65 ಚಿನ್ನದ ಪದಕ, 62 ನಗದು ಬಹುಮಾನಗಳನ್ನು ವಿತರಣೆ ಮಾಡಲಾಯಿತು.
2013–14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಒಟ್ಟು 64,102 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 30,515 ಮಂದಿ ಉತ್ತೀರ್ಣರಾಗಿದ್ದು, ಶೇ 47.60ರಷ್ಟು ಫಲಿತಾಂಶ ಬಂದಿದೆ. ಪದವಿ ಪಡೆದವರ ಪೈಕಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.
ಯುಜಿಸಿ ಮಾನ್ಯತೆ ಸಿಗದಿದ್ದ ಕಾರಣದಿಂದ 2013–14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿರಲಿಲ್ಲ. ಅವರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗಿದೆ.





