ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಅದರಲ್ಲೂ ಚಿಕ್ಕಮಗಳೂರು ಭಾಗಗಳಲ್ಲಿ ಭೂಕುಸಿತ, ಗುಡ್ಡಕುಸಿತವಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮನವಿ ಮಾಡಿದೆ.
ಈಗಾಗಲೇ ನದಿ ತೀರ, ತಗ್ಗುಪ್ರದೇಶ ಸೇರಿದಂತೆ ಅಪಾಯಕಾರಿ ಸ್ಥಳಕ್ಕೆ ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ. ಜತೆಗೆ ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್ ಕೂಡ ನಿಷೇಧಿಸಲಾಗಿದೆ. ಹೀಗಾಗಿ ಮಳೆ ಕಡಿಮೆಯಾಗುವವರೆಗೂ ಪ್ರವಾಸ ಮುಂದೂಡಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.
ಕರವಾಳಿ, ಮಲೆನಾಡು ಹಾಗೂ ಬಯಲು ಸೀಮೆಯಾದ್ಯಂತ ಗಾಳಿ ಸಮೇತ ಜೋರು ಮಳೆ ಸುರಿಯುತ್ತಿದ್ದು, ವರುಣನ ಆರ್ಭಟ ಮುಂದುವರೆದಿದೆ. ಕುದುರೆಮುಖ, ಕಳಸ, ಮೂಡಿಗೆರೆ, ಶೃಂಗೇರಿ, ಚಾರ್ಮಾಡಿ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ ಭದ್ರಾ, ಹೇಮಾವತಿ ನದಿಗಳು ತುಂಬಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.
ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಹತ್ತಾರು ಅವಾಂತರಗಳು ಸೃಷ್ಟಿಯಾಗಿದೆ. ಹೀಗಾಗಿ ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮಳೆ ಕಡಿಮೆಯಾಗುವವರೆಗೂ ಪ್ರವಾಸಕ್ಕೆ ಬರದಂತೆ ಸೂಚಿಸಿದೆ.