ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಶೇಖ್ ಹಸೀನಾ ಅವರು ಆಯ್ಕೆಯಾಗಿದ್ದಾರೆ.
ಶೇಖ್ ಹಸೀನಾ ಅವರು ಭಾನುವಾರ ಪ್ರಧಾನಿಯಾಗಿ ಘೋಷಣೆಗೊಂಡ ಬೆನ್ನಲ್ಲೇ ಇಂದು (ಸೋಮವಾರ) ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದು, ದ್ವಿಪಕ್ಷೀಯ ಸಂಬಂಧವನ್ನು ನರೆಯೆ ದೇಶದೊಂದಿಗೆ ಮತ್ತಷ್ಟು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮೋದಿ ಟ್ವೀಟ್ ಮಾಡಿದ್ದು, ಸಂಸತ್ ಚುನಾವಣೆಯಲ್ಲಿ ಐತಿಹಾಸಿಕ ನಾಲ್ಕನೇ ಬಾರಿಯ ಗೆಲುವು ದಾಖಲಿಸಿದ ಹಸೀನಾ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರ ಗೆಲುವಿಗೆ ಅಭಿನಂದಿಸಿದ್ದಾಗಿ ಪಿಎಂ ಪೋಸ್ಟ್ ಮಾಡಿದ್ದಾರೆ.
ಬಾಂಗ್ಲಾದೇಶದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ನಾನು ಬಾಂಗ್ಲಾದೇಶದ ಜನರನ್ನು ಅಭಿನಂದಿಸುತ್ತೇನೆ. ಬಾಂಗ್ಲಾದೇಶದೊಂದಿಗೆ ನಮ್ಮ ನಿರಂತರ ಮತ್ತು ಜನಕೇಂದ್ರಿತ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಅವಾಮಿ ಲೀಗ್ ಚುನಾವಣೆಯಲ್ಲಿ ಶೇ ೫೦ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲುವು ಕಂಡಿದೆ ಎಂದು ಚುನಾವಣಾ ಆಯೋಗ ವಕ್ತಾರರು ಹೇಳಿದ್ದಾರೆ. ಇದರೊಂದಿಗೆ ಶೇಖ್ ಹಸೀನಾ ನಾಲ್ಕನೇ ಬಾರಿಗೆ ಪ್ರಧಾನಿಯಾಗಿದ್ದಾರೆ.