ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಸುದ್ದಿಯನ್ನು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. 16ನೇ ರಾಷ್ಟ್ರೀಯ ಅಸೆಂಬ್ಲಿಗೆ ಸದಸ್ಯರನ್ನು ಆಯ್ಕೆ ಮಾಡಲು ಮುಂಬರುವ ವರ್ಷದ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ.
ಈ ಚುನಾವಣೆಗಾಗಿ ಸವೀರಾ ಪ್ರಕಾಶ್ ಎಂಬುವವರು ಪಂಖ್ತುಖ್ವಾದ ಬುನೇರ್ ಜಿಲ್ಲೆಯಲ್ಲಿ ಪಿಕೆ – 25ರ ಜನರಲ್ ಸೀಟ್‌ಗೆ ಪಾಕಿಸ್ತಾನ್ ಪೀಪಲ್ ಪಾರ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಸವೀರಾ ಪ್ರಕಾಶ್ ಅವರ ತಂದೆ ಓಂ ಪ್ರಕಾಶ್ ಅವರು ನಿವೃತ್ತ ವೈದ್ಯನಾಗಿದ್ದು, ಕಳೆದ 35 ವರ್ಷಗಳಿಂದ ಪಾಕಿಸ್ತಾನ ಪೀಪಲ್ ಪಾರ್ಟಿಯ ಕಟ್ಟಾ ಸದಸ್ಯರಾಗಿದ್ದಾರೆ. ಈಗ ತಂದೆ ಹಾದಿಯಲ್ಲಿಯೇ ಸವೀರಾ ಪ್ರಕಾಶ್ ಸಹ ಸಾಗಲು ನಿರ್ಧರಿಸಿದ್ದಾರೆ.





