ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಕೈಗೊಳ್ಳಬೇಕೆಂದರೆ ವಿಸಾ ಹೊಂದಿರಬೇಕಾದದ್ದು ಕಡ್ಡಾಯ ನಿಯಮ. ಆದರೆ ಕೆಲ ದೇಶಗಳು ಇತರೆ ದೇಶಗಳಿಗೆ ವಿಸಾ ರಹಿತ ಪ್ರವೇಶವನ್ನು ನೀಡುವುದರ ಮೂಲಕ ಕೆಲ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಕೆಲಸಕ್ಕೆ ಆಗಾಗ ಕೈ ಹಾಕುತ್ತಾ ಇರುತ್ತವೆ. ಕೆಲ ದಿನಗಳ ಹಿಂದೆ ಥೈಲ್ಯಾಂಡ್ ಭಾರತೀಯರು ನಮ್ಮ ದೇಶಕ್ಕೆ ವಿಸಾ ಇಲ್ಲದೇ ಪ್ರಯಾಣ ಕೈಗೊಳ್ಳಬಹುದು ಎಂದು ಘೋಷಣೆ ಮಾಡಿದ್ದ ಬೆನ್ನಲ್ಲೇ ಇದೀಗ ಮಲೇಷಿಯಾ ಸಹ ಅದೇ ಹಾದಿಯನ್ನು ತುಳಿದಿದೆ.
ಹೌದು, ಭಾರತ ಹಾಗೂ ಚೀನಾ ದೇಶದ ಪ್ರಜೆಗಳು ಡಿಸೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಮಲೇಷಿಯಾ ದೇಶಕ್ಕೆ ಯಾವುದೇ ವಿಸಾ ಇಲ್ಲದೇ ಪ್ರಯಾಣ ಕೈಗೊಳ್ಳಬಹುದು ಎಂದು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಘೋಷಿಸಿದ್ದಾರೆ.
ಹೀಗೆ ಮಲೇಷಿಯಾ ಪ್ರಧಾನಿ ಇಂತಹ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇದರ ಹಿಂದಿನ ಉದ್ದೇಶ ಏನಿರಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಡಿಸೆಂಬರ್ ತಿಂಗಳಲ್ಲಿ ವಿದೇಶ ಪ್ರಯಾಣ ಕೈಗೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ, ಅದರಲ್ಲಿಯೂ ಹೊಸ ವರ್ಷದ ಆಚರಣೆಗಾಗಿ ಡಿಸೆಂಬರ್ ಅಂತ್ಯದಲ್ಲಿ ಭಾರತೀಯರು ವಿದೇಶ ಪ್ರಯಾಣ ಕೈಗೊಳ್ಳುವುದು ಹೆಚ್ಚು.
ಹೀಗಾಗಿ ವಿಸಾ ರಹಿತ ಪ್ರವೇಶಕ್ಕೆ ಭಾರತೀಯರಿಗೆ ಅನುಮತಿ ನೀಡಿದರೆ ಟೂರಿಸಂಗೆ ಬೂಸ್ಟ್ ಸಿಗಲಿದೆ ಎಂಬ ಉದ್ದೇಶದಿಂದ ಮಲೇಷಿಯಾ ಇಂತಹ ನಿರ್ಧಾರ ಕೈಗೊಂಡಿದೆ. ಥೈಲ್ಯಾಂಡ್ ಸಹ ಇಂತಹದ್ದೇ ಉದ್ದೇಶದೊಂದಿಗೆ ಭಾರತೀಯರಿಗೆ ವಿಸಾ ರಹಿತ ಪ್ರವೇಶವನ್ನು ಘೋಷಿಸಿತ್ತು. ನವೆಂಬರ್ 10ರಿಂದ 2024ರ ಮೇ 10ರವರೆಗೆ ಭಾರತೀಯರು ನಮ್ಮ ದೇಶಕ್ಕೆ ವಿಸಾ ರಹಿತ ಪ್ರವೇಶ ಪಡೆಯಬಹುದು ಹಾಗೂ 30 ದಿನಗಳ ಕಾಲ ಉಳಿಯಬಹುದು ಎಂದು ಘೋಷಿಸಿತ್ತು.