ಟೆಲ್ ಅವಿವ್ : ಇಸ್ರೇಲ್-ಹಮಾಸ್ ನಡುವಿನ ಯುದ್ಧ ಪ್ರಾರಂಭವಾಗಿ ತಿಂಗಳು ಕಳೆದಿದೆ. ಅಕ್ಟೋಬರ್ 7 ರಂದು ಪ್ರಾರಂಭವಾದ ದಾಳಿಗೆ ಇಸ್ರೇಲ್ ಇದೀಗ ಕೊಂಚ ವಿರಾಮಕ್ಕೆ ಒಪ್ಪಿದೆ. ದಿನಕ್ಕೆ 4 ಗಂಟೆ ಕದನ ವಿರಾಮವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೃಢಪಡಿಸಿದ್ದಾರೆ.
ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುವುಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಯುದ್ಧಕ್ಕೆ ಸಂಪೂರ್ಣ ವಿರಾಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದಿನದಲ್ಲಿ 20 ಗಂಟೆ ಯುದ್ಧ ನಡೆದರೆ 4 ಗಂಟೆ ದಾಳಿ ನಡೆಸುವುದಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.
ಆದರೆ ಹಮಾಸ್ ಉಗ್ರರ ವಿರುದ್ಧದ ದಾಳಿ ಎಂದಿಗೂ ನಿಲ್ಲುವುದಿಲ್ಲ. ಇಸ್ರೇಲ್‌ನ ದಾಳಿಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಪ್ರತಿ ದಿನ 4 ಗಂಟೆ ದಾಳಿ ನಿಲ್ಲಿಸಲಾಗುತ್ತದೆ. ಆದರೆ ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರಿಯುತ್ತಲೇ ಇರುತ್ತದೆ. ನಾವು ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಹಾಗೂ ಇಡೀ ನಗರದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಿಲ್ಲ. ಆದರೆ ಉಗ್ರರನ್ನು ಮಾತ್ರ ಸುಮ್ಮನೆ ಬಿಡಲಾಗುವುದಿಲ್ಲ ಎಂದಿದ್ದಾರೆ.
ಇಸ್ರೇಲ್‌ನಲ್ಲಿ 1,400 ಜನರನ್ನು ಕೊಂದಿರುವ ಹಮಾಸ್ ಉಗ್ರರು ಇನ್ನು ಕೂಡಾ ಮಕ್ಕಳು, ವೃದ್ಧರು ಸೇರಿದಂತೆ 239 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಇಸ್ರೇಲ್‌ನ ಅಧಿಕಾರಿಗಳು ಹೇಳಿದ್ದಾರೆ. ಅವರಲ್ಲಿ ಸುಮಾರು 10 ಅಮೆರಿಕನ್ನರು ಸೇರಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದ ಮೇಲಿನ ದಾಳಿಗೆ ಇಲ್ಲಿಯವರೆಗೆ 10,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.





