ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷ ಪ್ರಾಸನ ಮಾಡಿಸಲಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿ ಬೆನ್ನಲ್ಲೇ, ಆತನ ಕುಟುಂಬದ ಸದಸ್ಯರು ವಿಷಪ್ರಾಶನ ವಿಚಾರವನ್ನು ಅಲ್ಲಗೆಳೆದಿದ್ದಾರೆ.
ದಾವೂದ್ ಆರೋಗ್ಯದ ಕುರಿತ ವಿಚಾರ ಹೊರಬೀಳುತ್ತಿದ್ದಂತೆಯೇ ಮುಂಬೈ ಪೊಲೀಸರು ನಗರದಲ್ಲಿನ ದಾವೂದ್ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮನೆಗೆ ತಂಡವನ್ನು ಕಳುಹಿಸಲಾಗಿದೆ. ಅಲ್ಲಿ ದಾವೂದ್ ಸೋದರಳಿಯ, ಆರೋಗ್ಯ ಸಮಸ್ಯೆಗಳಿಂದ ಚೆನ್ನಾಗಿಲ್ಲ, ಆದರೆ ವಿಷಪ್ರಾಸನವಾಗಿಲ್ಲ ಎಂದು ಪೊಲೀಸರಿಗೆ ಖಚಿತಪಡಿಸಿದ್ದಾರೆ.
ಭಾನುವಾರ ರಾತ್ರಿಯಿಂದ ದಾವೂದ್ ಆರೋಗ್ಯದ ಬಗ್ಗೆ ವರದಿಗಳು ಹೊರ ಬರುತ್ತಿವೆ. ಆದರೆ ಇದರ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ಜತೆಗೆ ಪಾಕಿಸ್ತಾನದಿಂದಲೂ ಮಾಹಿತಿ ಇಲ್ಲವಾಗಿದೆ. ವಿಷಪ್ರಾಶನದಿಂದಾಗಿ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ದಾವೂದ್ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಪಾಕ್ ಸೇನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಕರಾಚಿ, ರಾವಲ್ಪಿಂಡಿ, ಲಾಹೋರ್ ಹಾಗೂ ಇಸ್ಲಾಮಾಬಾದ್‍ನಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.