Mysore
16
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ : ಹಮಾಸ್‌ ಎಚ್ಚರಿಕೆ

ಬೈರುತ್‌ : ಒಂದಲ್ಲ ಒಂದುದಿನ ಸೋವಿಯತ್‌ ಒಕ್ಕೂಟದಂತೆ ಅಮೆರಿಕ ಕೂಡ ನಾಶವಾಗುತ್ತದೆ ಎಂದು ಹಮಾಸ್‌ ಹಿರಿಯ ಅಧಿಕಾರಿ ಅಲಿ ಬರಾಕಾ ಎಚ್ಚರಿಕೆ ನೀಡಿದ್ದಾರೆ.

ಲೆಬನಾನ್‌ ಯುಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಲಿ ಬರಾಕಾ, ಅಮೆರಿಕದ ಎಲ್ಲಾ ಶತ್ರುಗಳು ಸಮಾಲೋಚನೆ ನಡೆಸುತ್ತಿದ್ದಾರೆ ಮತ್ತು ಹತ್ತಿರವಾಗುತ್ತಿದ್ದಾರೆ. ಅವರೆಲ್ಲರೂ ಒಟ್ಟಿಗೇ ಒಂದು ದಿನ ಯುದ್ಧ ಮಾಡಬಹುದು. ಆಗ ಅಮೆರಿಕ ಶಕ್ತಿಯುತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಉತ್ತರ ಕೊರಿಯಾದ ಸಾಮರ್ಥ್ಯವನ್ನು ಶ್ಲಾಘಿಸಿರುವ ಬರಾಕಾ, ನಮಗೆ ತಿಳಿದಿರುವಂತೆ ವಿಶ್ವದಲ್ಲಿ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವುದು ಉತ್ತರ ಕೊರಿಯಾಕ್ಕೆ. ಶೀಘ್ರದಲ್ಲೇ ಇಸ್ರೇಲ್‌ ಹಮಾಸ್‌ ಯುದ್ಧದ ನಡುವೆ ಉತ್ತರ ಕೊರಿಯಾ ಮಧ್ಯಪ್ರವೇಶಿಸುವ ದಿನ ಬರಬಹುದು. ಇರಾನ್‌ ಅಮೆರಿಕವನ್ನು ಹೊಡೆಯುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ಇರಾನ್‌ ಯುದ್ಧದ ನಡುವೆ ಮಧ್ಯಪ್ರವೇಶಿಸಿದರೆ, ಅದು ಝಿಯೋನಿಸ್ಟ್ ಘಟಕ ಮತ್ತು ಈ ಪ್ರದೇಶದಲ್ಲಿನ ಅಮೆರಿಕಾದ ನೆಲೆಗಳನ್ನು ಹೊಡೆಯಬಹುದ ಅಷ್ಟೇ ಎಂದು ತಿಳಿಸಿದ್ದಾರೆ.

ಹಮಾಸ್‌ ಬಂಡುಕೋರರ ವಿರುದ್ಧ ಸಮರ ನಡೆಸುತ್ತಿರುವ ಇಸ್ರೇಲ್‌ ಬೆನ್ನಿಗೆ ಬೆಂಬಲವಾಗಿ ನಿಂತಿರುವ ಅಮೆರಿಕ ಸರ್ಕಾರ ಈಗ 14.5 ಬಿಲಿಯನ್‌ ಅಮೆರಿಕನ್‌ ಡಾಲರ್‌ (1.19 ಲಕ್ಷ ಕೋಟಿ ರೂ.) ನೆರವು ಘೋಷಣೆ ಮಾಡಿದೆ. ಅಧ್ಯಕ್ಷ ಜೋ ಬೈಡನ್‌ ಆಡಳಿತ ಇಸ್ರೇಲ್‌ಗೆ ಮಿಲಿಟರಿ ನೆರವು ನೀಡುವ ಸಂಬಂಧ ಹೌಸ್‌ ಆಫ್‌ ರೆಪ್ರೆಸೆಂಟಿಟಿವ್ಸ್ ಸಭೆಯಲ್ಲಿ ಮಂಡಿಸಿದ ವಿಧೇಯಕ ಅಂಗೀಕಾರಗೊಂಡಿದೆ. ಸ್ಪೀಕರ್‌ ಮೈಕ್‌ ಜಾನ್ಸನ್‌ ಮಂಡಿಸಿದ ಪ್ರಸ್ತಾವಕ್ಕೆ ರಿಪಬ್ಲಿಕನ್‌ ಪಕ್ಷದ ಹಿಡಿತದಲ್ಲಿರುವ ಜನಪ್ರತಿನಿಧಿ ಸಭೆ ಅಂಗೀಕಾರದ ಮುದ್ರೆ ಒತ್ತಿದೆ.

ಜನ ಪ್ರತಿನಿಧಿ ಸಭೆಯಲ್ಲಿ 226-196 ಮತಗಳಿಂದ ವಿಧೇಯಕ ಅಂಗೀಕಾರಗೊಂಡಿದ್ದು, ಡೆಮಾಕ್ರಟಿಕ್‌ ಪಕ್ಷ ಬಹುಮತ ಹೊಂದಿರುವ ಸೆನೆಟ್‌ ಆರ್ಥಿಕ ನೆರವು ನೀಡುವ ಉದ್ದೇಶದ ವಿಧೇಯಕಕ್ಕೆ ಅಂಗೀಕಾರ ನೀಡಬೇಕಿದೆ. ಸೆನೆಟ್‌ ವಿಧೇಯಕಕ್ಕೆ ಅನುಮೋದನೆ ನೀಡದಿದ್ದರೆ ‘ವಿಟೋ’ ಅಧಿಕಾರ ಬಳಸಬೇಕಾಗುತ್ತದೆ ಎಂದು ಅಧ್ಯಕ್ಷ ಬೈಡನ್‌ ಎಚ್ಚರಿಕೆ ನೀಡಿದ್ದಾರೆ.

ಯುದ್ಧ ಮುಂದುವರಿಸಲು ಇಸ್ರೇಲ್‌ ರಕ್ಷಣಾ ಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರ ಬಲ ನೀಡಲು ನಿರ್ಧರಿಸಲಾಗಿದೆ. ಇಸ್ರೇಲ್‌ನ ಐರನ್‌ ಡೋಮ್‌ ಬಲಪಡಿಸಲು 4 ಮಿಲಿಯನ್‌ ಡಾಲರ್‌ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!