Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ರಕ್ತದ ಜೊತೆಗೆ ತಳಮಳ; ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಪ್ರಾರಂಭ

ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’ಗೆ ಇತ್ತೀಚೆಗೆ ಅಧಿಕೃತ ಚಾಲನೆ ಸಿಕ್ಕಿದೆ. ವಿಶೇಷವೆಂದರೆ, ಚಿತ್ರದ ಮುಹೂರ್ತದ ದಿನವೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಹಿಂದೊಮ್ಮೆ ನಿರ್ಮಾಪಕರಾದ ದ್ವಾರಕೀಶ್‍, ಎನ್‍. ವೀರಾಸ್ವಾಮಿ ಮುಂತಾದವರು ಚಿತ್ರದ ಮುಹೂರ್ತದ ದಿನವೇ ಬಿಡುಗಡೆ ದಿನಾಂಕ ಘೋಷಿಸವ ಪರಿಪಾಠ ಇಟ್ಟುಕೊಂಡಿದ್ದರು. ಇದೀಗ ಅದು ಮುಂದುವರೆದಿದೆ.

‘ಎಕ್ಕ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿರುವ ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್‍ ಪದಕಿ. ಈ ಹಿಂದೆ ‘ರತ್ನನ್‍ ಪ್ರಪಂಚ’ ಮತ್ತು ‘ಉತ್ತರಕಾಂಡ’ ಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಮೂರನೇ ಚಿತ್ರ. ‘ಎಕ್ಕ’ ಎಂಬ ಶೀರ್ಷಿಕೆಯ ಕುರಿತು ಮಾತನಾಡುವ ಅವರು, ‘ಈ ಹಿಂದೆ ‘ಜಾಕಿ’ ಚಿತ್ರಕ್ಕೆ ‘ಎಕ್ಕ’ ಎಂಬ ಶೀರ್ಷಿಕೆ ಮೊದಲು ಇಡಲಾಗಿತ್ತು. ಚಿತ್ರದಲ್ಲಿ ನಾಯಕನ ಹೆಸರು ಜಾಕಿ ಎಂದಾದ್ದರಿಂದ, ಕೊನೆಗೆ ‘ಜಾಕಿ’ ಎಂದು ಇಡಲಾಯ್ತು. ನಮ್ಮ ಚಿತ್ರದಲ್ಲಿ ನಾಯಕನ ಹೆಸರು ಎಕ್ಕ ಆದ್ದರಿಂದ ಮತ್ತು ಕಥೆಗೆ ಅದು ಪೂರಕವಾಗಿರುವುದರಿಂದ, ಅದನ್ನೇ ಇಟ್ಟಿದ್ದೇವೆ. ಮೊದಲು ‘ಎಕ್ಕ ರಾಜ ರಾಣಿ’ ಎಂಬ ಟೈಟಲ್‍ ಇಡುವ ಯೋಚನೆಯೂ ಇತ್ತು. ಕೊನೆಗೆ ‘ಎಕ್ಕ’ ಫೈನಲ್‍ ಆಯಿತು’ ಎನ್ನುತ್ತಾರೆ.

ಈ ಚಿತ್ರದಲ್ಲಿ ಮಾಸ್‍ ಅಂಶಗಳ ಜೊತೆಗೆ ಗಟ್ಟಿ ಕಥೆ ಸಹ ಇದೆ ಎನ್ನುವ ಅವರು, ‘ಇದೊಂದು ರಾ ಚಿತ್ರ. ಅದರ ಜೊತೆಗೆ ಸಾಕಷ್ಟು ಭಾವನೆಗಳಿವೆ. ಚಿತ್ರದ ಮೂಲಕ ಮನುಷ್ಯನ ತಳಮಳವಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ‘ರತ್ನನ್‍ ಪ್ರಪಂಚ’ ಚಿತ್ರದಲ್ಲೂ ತಳಮಳವಿತ್ತು. ಆದರೆ, ಅದರಲ್ಲಿ ರಕ್ತ ಇರಲಿಲ್ಲ. ಇದರಲ್ಲಿ ರಕ್ತ ಇದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ವಿಷಯ ಈ ಚಿತ್ರದಲ್ಲಿದೆ. ಈ ಚಿತ್ರ ಬರೀ ಅಭಿಮಾನಿಗಳಿಗೆ ಸೀಮಿತವಾಗಬಾರದು. ಕನ್ನಡ ಪ್ರೇಕ್ಷಕರು ಬಂದು ನೋಡಬೇಕು’ ಎಂದರು.

ಇದೊಂದು ಪಕ್ಕಾ ಮಾಸ್‍ ಚಿತ್ರ ಎನ್ನುವ ಯುವ ರಾಜಕುಮಾರ್‍, ‘ಇದೊಂದು ಮಾಸ್‍ ಚಿತ್ರ. ಮಾಸ್ ಅಂಶಗಳ ಜೊತೆಗೆ ಹಲವು ಭಾವನೆಗಳಿವೆ. ಪರಿಸ್ಥಿತಿ ಒಬ್ಬ ಮನುಷ್ಯನನ್ನು ಹೇಗೆ ಬದಲಾಯಿಸುತ್ತದೆ ಎಂಬದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಮೊದಲ ಬಾರಿಗೆ ತುಂಬಾ ಮಾಸ್‍ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮೊದಲ ಚಿತ್ರಕ್ಕೂ, ಈ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದು ಸಲೈಂಟ್‍ ಪಾತ್ರ, ಇದು ವೈಲೆಂಟ್ ಪಾತ್ರ’ ಎಂದರು.

‘ಎಕ್ಕ’ ಚಿತ್ರವನ್ನು PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್‍ ಮತ್ತು KRG ಸ್ಟುಡಿಯೋಸ್‍ ಅಡಿ ಅಶ್ವಿನಿ ಪುನೀತ್‍ ರಾಜಕುಮಾರ್‍, ಜಯಣ್ಣ, ಭೋಗೇಂದ್ರ, ಕಾರ್ತಿಕ್‍ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಸಂಪದ ಹುಲಿವಾನ ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಅತುಲ್‍ ಕುಲಕರ್ಣಿ, ಶ್ರುತಿ, ಡಾ. ಸೂರಿ, ಪೂರ್ಣಚಂದ್ರ ಮೈಸೂರು, ಪುನೀತ್‍ ರುದ್ರನಾಗ್‍ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್‍ ರಾಜ್‍ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.

Tags:
error: Content is protected !!