ಸಿನಿಮಾ ಸಮಾರಂಭದಲ್ಲಿ ಯಶ್ ಕಾಣಿಸಿಕೊಳ್ಳದೆ ಕೆಲವು ವರ್ಷಗಳೇ ಆಗಿದ್ದವು. ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಯಶ್, ಬಿಡುವು ಮಾಡಿಕೊಂಡು ಚಿತ್ರ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಅದೇ ‘ಮನದ ಕಡಲು’ ಟ್ರೇಲರ್ ಬಿಡುಗಡೆ ಸಮಾರಂಭ. ‘ಮನದ ಕಡಲು ಚಿತ್ರವು ಮಾರ್ಚ್ 28ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಭಾನುವಾರ ಬೆಂಗಳೂರಿನ ಲುಲು ಮಾಲ್‍ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಒಂದಿಷ್ಟು ಮಾತನಾಡಿದ್ದಾರೆ.
ತಾನು ಈ ಸಮಾರಂಭಕ್ಕೆ ಬರಲು ಮೊದಲ ಕಾರಣ ನಿರ್ಮಾಪಕ ಇ. ಕೃಷ್ಣಪ್ಪ ಅವರು ಎಂದು ಮಾತನಾಡಿದ ಯಶ್, ‘ಕೃಷ್ಣಪ್ಪ ಅವರು ನನಗೆ ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಟಿಸಲು ಅವಕಾಶ ನೀಡದೆ ಇದ್ದಿದ್ದರೆ ನಾನು ಇಂದು ನಾಯಕನಾಗುತ್ತಿರಲ್ಲಿಲ್ಲ. ನನ್ನ ಮೊದಲ ಚಿತ್ರದ ನಿರ್ಮಾಪಕರು ಅವರು. ನಾನು ಧಾರಾವಾಹಿಗಳಲ್ಲಿ ನಟಿಸುವಾಗಲೇ, ಕೆಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಬರುತ್ತಿತ್ತು. ಒಂದು ದಿನ ಒಬ್ಬರು ಮ್ಯಾನೇಜರ್‌ಗೆ ಹೇಳಿ ಕಳಿಸಿದ್ದರು. ಶೂಟಿಂಗ್‌ನಲ್ಲಿ ಇದ್ದಿದ್ದರಿಂದ ಹೋಗೋಕೆ ಆಗಿರಲಿಲ್ಲ. ಒಂದು ದಿನ ನಂತರ ಹೋದೆ. ಕೆಳಗಡೆ ಪ್ರೊಡಕ್ಷನ್ ಮ್ಯಾನೇಜರ್ ಸಿಕ್ಕರು. ‘ನಮ್ಮ ನಿರ್ದೇಶಕರು, ನಿರ್ಮಾಪಕರು ನೀವೇ ಬೇಕು ಅಂತ ಕಾಯುತ್ತಿದ್ದಾರೆ’ ಎಂದರು. ನಾನು ಮೇಲೆ ರೂಮಿಗೆ ಹೋದೆ. ನಿರ್ಮಾಪಕರು ಮತ್ತು ನಿರ್ದೇಶಕರು ನೋಡಿ, ನೀವು ಯಾರು ಎಂದರು? ಆಗ ನನಗೆ ಸ್ವಲ್ಪ ಟ್ರಿಗರ್ ಆಯ್ತು. ಅದೆಲ್ಲವನ್ನೂ ತಡೆದಿಟ್ಟುಕೊಂಡೆ. ನನ್ನ ಫೋಟೋ ಕೇಳಿದರು. ನನ್ನ ಹತ್ತಿರ ಇರಲಿಲ್ಲ. ‘ಯಾರು ನನಗೆ ಕೆಲಸ ಕೊಡುತ್ತಾರೋ, ನಾನು ಹೋಗಿ ಭಕ್ತಿಯಿಂದ ನಟಿಸಿ ಬರುತ್ತೀನಿ ಎಂದು ಹೇಳಿದೆ. ಚಿತ್ರದ ಕಥೆ ಏನು ಎಂದು ಕೇಳಿದರೆ, ಅವರು ಕಥೆ ಹೇಳಲಿಲ್ಲ. ನಾನು ಬಿಟ್ಟು ಹೊರಗೆ ಬಂದೆ’ ಎಂದು ನೆನಪಿಸಿಕೊಂಡರು ಯಶ್.
‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಟಿಸುವುದಕ್ಕೆ ಕೊನೆಯ ಕ್ಷಣದಲ್ಲಿ ಅವಕಾಶ ಸಿಕ್ಕಿತು ಎಂದ ಯಶ್, ‘ರಾಧಿಕಾ ಪಂಡಿತ್ ನನ್ನ ಫ್ರೆಂಡ್. ಅವರು ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತಿತ್ತು. ನಾನು ಅವಳಿಗೆ ವಿಶ್ ಮಾಡಿದ್ದೆ. ಹೀಗಿರುವಾಗ, ಚಿತ್ರತಂಡದಿಂದ ಫೋನ್ ಬಂತು. ಸಿನಿಮಾ ಮುಕ್ತಾಯದ ಹಂತಕ್ಕೆ ಬಂದಿರುವಾಗ ನನಗೆ ಯಾಕೆ ಫೋನ್ ಮಾಡುತ್ತಿದ್ದಾರೆ ಎಂದನಿಸಿತು. ರಾಧಿಕಾಗೆ ಫೋನ್ ಮಾಡಿದರೆ, ನಾಯಕನಾಗಿ ನಟಿಸುತ್ತಿರುವವರ ಕಾಲಿಗೆ ಏಟಾಗಿರುವುದರಿಂದ, ಬಹುಶಃ ಫೋನ್ ಬಂದಿರಬೇಕು ಎಂದಳು. ಸರಿ ಕೃಷ್ಣಪ್ಪ ಅವರ ಆಫೀಸಿಗೆ ಹೋದೆ. ಅಲ್ಲಿ ನಿರ್ದೇಶಕ ಶಶಾಂಕ್ ಕಥೆ ಹೇಳುವುದರ ಜೊತೆಗೆ ಹಾಡುಗಳನ್ನು ಕೇಳಿಸಿದರು. ಅಂದು ಶಶಾಂಕ್ ಅವರು ನನ್ನನ್ನು ನಡೆಸಿಕೊಂಡ ರೀತಿಗೆ ಅಂದಿನಿಂದ ಅವರ ಮೇಲೆ ಅದೇ ಗೌರವ ಇದೆ. ಅದಾದ ಮೇಲೆ ಕೃಷ್ಣಪ್ಪ ಅವರ ಚೇಂಬರ್‌ಗೆ ಕರೆದುಕೊಂಡು ಹೋಗಿದ್ದರು. ಅವರು ನನ್ನನ್ನು ನೋಡಿ ಗುರುತು ಹಿಡಿದು ಮಾತನಾಡಿಸಿದರು. ಆ ವ್ಯಕ್ತಿ ಅವತ್ತು ನಡೆದುಕೊಂಡ ರೀತಿಗೆ ಅವರ ಮೇಲೆ ಇವತ್ತಿನವರೆಗೂ ಅದೇ ಗೌರವವಿದೆ. ಆ ಸಂಸ್ಥೆ, ಹೊಸ ಕಲಾವಿದನಿಗೆ ಅವಕಾಶ ಕೊಟ್ಟಿದ್ದರಿಂದಲೇ, ಇಂದು ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.
ಅದಾದ ಮೇಲೆ ಚಿತ್ರರಂಗದಲ್ಲಿ ಪ್ರಯಾಣ ಮುಂದುವರೆಯಿತು ಎಂದ ಯಶ್, ‘ಈ ವೇದಿಕೆ ಮೇಲೆ ಬಂದಾಗ ಖುಷಿಯಾಯ್ತು. ಮುರಳಿ ಮಾಸ್ಟರ್, ಎಡಿಟರ್ ಪ್ರಕಾಶ್, ಯೋಗರಾಜ್ ಭಟ್ … ಇವರೆಲ್ಲರೂ ನನ್ನ ಜೀವನದಲ್ಲಿ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ನಿದ್ದೆಗೆಟ್ಟು ನನ್ನನ್ನು ಬೆಳೆಸಿದ್ದಾರೆ. ಒಬ್ಬ ವ್ಯಕ್ತಿ ಯಾವತ್ತೂ ತಾನಾಗಿಯೇ ಬೆಳೆಯುವುದಿಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್‌ಗಳಾಗಿ ನಿಂತಿರುತ್ತಾರೆ. ಅವರೆಲ್ಲರೂ ಬೆವರು ಹರಿಸಿ, ಒಬ್ಬನ್ನ ಮುಂದೆ ತಳ್ಳುತ್ತಾರೆ. ನನ್ನನ್ನು ತಳ್ಳಿದ್ದರಿಂದಲೇ ನಾನು ಇಷ್ಟು ದಿನ ಚಿತ್ರರಂಗದಲ್ಲಿ ಇರುವುದಕ್ಕೆ ಸಾಧ್ಯವಾಯಿತು. ಆ ಜಾವಾಬ್ದಾರಿ ಗೊತ್ತಿದೆ. ಹಾಗಾಗಿ, ಅವರೆಲ್ಲಾ ಖುಷಿಪಡುವ ರೀತಿಯಲ್ಲಿ ಬೆಳೆಯಬೇಕು’ ಎಂದರು ಯಶ್.





