‘ಎಲಾ ಕುನ್ನಿ’ ಚಿತ್ರದಲ್ಲಿ ಕೋಮಲ್ ಹೇಗೆ ಕಾಣಿಸುತ್ತಾರೆ ಎಂದು ಗೊತ್ತಿದೆ. ಚಿತ್ರದ ಅವರ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ವಜ್ರಮುನಿ ತರಹ ಕೋಮಲ್ ಕಾಣಬಹುದು, ಆದರೆ ವಜ್ರಮುನಿಯಾಗಿ ಅವರ ನಟನೆ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
‘ಯಲಾಕುನ್ನಿ’ ಚಿತ್ರದ ಟೀಸರ್ ಇತ್ತೀಚೆಗೆ ನಡೆದ ‘ಗಿಚ್ಚಿ ಗಿಲಿಗಿಲಿ’ ಫೈನಲ್ ನಲ್ಲಿ ಬಿಡುಗಡೆಯಾಯಿತು. ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್‍ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದು, ಹೊಸ ಪ್ರತಿಭೆ ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ,ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಅಂದಹಾಗೆ, ಈ ‘ಯಲಾ ಕುನ್ನಿ’ ಎನ್ನುವುದು ವಜ್ರಮುನಿ ಅವರ ಜನಪ್ರಿಯ ಸಂಭಾಷಣೆ. ಈ ಸಂಭಾಷಣೆಯನ್ನು ಅವರು ‘ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಸಾಹುಕಾರ್ ಸಿದ್ಧಪ್ಪನಾಗಿ ಹೇಳಿದ್ದರು. ಅಲ್ಲಿಂದ ಈ ಸಂಭಾಷಣೆ ಸಾಕಷ್ಟು ಜನಪ್ರಿಯವಾಗಿದ್ದು, ಇದೀಗ ಅದೇ ‘ಯಲಾ ಕುನ್ನಿ’ ಎಂಬ ಪದಗಳು ಕೋಮಲ್ ಅಭಿನಯದ ಚಿತ್ರದ ಶೀರ್ಷಿಕೆಯಾಗಿದೆ. ಈ ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವೂ ಇದೆ.
‘ಯಲಾ ಕುನ್ನಿ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಕುಂಬಳಕಾಯಿ ಒಡೆಯಲಾಗಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಚಿತ್ರಕ್ಕಾಗಿ ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ.
ಕೋಮಲ್‍ಗೆ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ನಟಿಸಿದ್ದಾರೆ. ಜೊತೆಗೆ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್‍ಕರ್, ಮಾನಸಿ ಸುಧೀರ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಮಯೂರ್ ಪಟೇಲ್ ಮೊದಲ ಬಾರಿಗೆ ಖಳನಾಯಕನಾಗಿ ನಟಿಸಿದ್ದಾರೆ.
ವಿಶೇಷವೆಂದರೆ, ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾರೆ.





