ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ನೆನಪಿರಬಹುದು. ಅದರಲ್ಲಿ ಅವರು ಮಹಾಕ್ಷಯ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಾನತ್ತಿಗೊಳಗಾಗಿರುವ ಅವರು ಅದನ್ನು ಮುಗಿಸಿ ಬಂದಿರುತ್ತಾರೆ. ಇಷ್ಟಕ್ಕೂ ಚಿತ್ರದಲ್ಲಿ ಸುದೀಪ್ ಯಾಕೆ ಸಸ್ಪೆಂಡ್ ಆಗಿರುತ್ತಾರೆ?
ಆ ಕಥೆಯನ್ನು ಹೇಳುವುದಕ್ಕೆ ಇದೀಗ ‘ಮ್ಯಾಕ್ಸ್ 2’ ಚಿತ್ರ ತಯಾರಾಗುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ‘ಮ್ಯಾಕ್ಸ್’, ಯಶಸ್ವಿಯಾದ ಹಿನ್ನೆಲೆಯಲ್ಲಿ, ಚಿತ್ರದ ಮುಂದುವರೆದ ಭಾಗ ಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಈಗ ಅದು ನಿಜವಾಗಿದೆ. ‘ಮ್ಯಾಕ್ಸ್ 2’ ಬರುವುದು ನಿಜವಾಗಿದ್ದು, ಸದ್ಯದಲ್ಲೇ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಮೊದಲ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್. ಧಾನು ಮತ್ತು ಸುದೀಪ್ ಜೊತೆಯಾಗಿ ನಿರ್ಮಾಣ ಮಾಡಿದ್ದರು. ‘ಮ್ಯಾಕ್ಸ್ 2’ ಚಿತ್ರವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬ ವಿಷಯ ಸದ್ಯದಲ್ಲೇ ಹೊರಬೀಳಲಿದೆ. ಈ ಚಿತ್ರದಲ್ಲಿ ಸುದೀಪ್ ತಮ್ಮ ಮಹಾಕ್ಷಯ್ ಪಾತ್ರವನ್ನು ಮುಂದುವರೆಸಲಿದ್ದಾರೆ.
ಇದು ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗವಲ್ಲ, ಅದರ ಹಿಂದಿನ ಭಾಗ. ಕನ್ನಡದಲ್ಲಿ ಇದೀಗ ಪ್ರೀಕ್ವೆಲ್‍ಗಳ ಟ್ರೆಂಡ್ ಶುರುವಾಗಿದ್ದು, ‘ಮ್ಯಾಕ್ಸ್ 2’ ಸಹ ಒಂದು ಪ್ರೀಕ್ವೆಲ್ ಆಗಿರುತ್ತದೆ ಎಂಬುದು ವಿಶೇಷ.
ಸುದೀಪ್ ಅಭಿನಯದ ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ 10 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆಎರಡನೇ ಹಂತದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ನೈಸ್ ರಸ್ತೆಯ ಬಳಿ ಚಿತ್ರಕ್ಕೆಂದೇ ದೊಡ್ಡ ಸೆಟ್ ನಿರ್ಮಿಸಲಾಗುತ್ತಿದ್ದು, ಅಲ್ಲಿ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೂ ಮೊದಲೇ ‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ಮುಗಿದು, ಮೊದಲು ಬಿಡುಗಡೆ ಆಗುವ ಸಾಧ್ಯತೆ ಇದೆ.





