ಹಿರಿಯ ಖಳನಟ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್ ಅಭಿನಯದ ಯಾವೊಂದು ಚಿತ್ರಗಳು ಸಹ ಇತ್ತೀಚಿನ ವರ್ಷಗಳಲ್ಲಿ ಯಶಸ್ವಿಯಾಗಿಲ್ಲ. ಒಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿರುವ ಧರ್ಮ, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ.
ಈ ಚಿತ್ರದ ಹೆಸರು ‘ಟನೆಂಟ್’. ಹಾಗೆಂದರೆ, ಬಾಡಿಗೆದಾರ ಎಂದು ಎಲ್ಲರಿಗೂ ಗೊತ್ತೇ ಇದೆ. ಮನೆಯೊಂದರಲ್ಲಿ ನಡೆಯುವ ಕ್ರೈಮ್ ಥ್ರಿಲ್ಲರ್ ಚಿತ್ರ ಇದು. ಧರ್ಮ ಜೊತೆಗೆ ಸೋನು ಗೌಡ ಮತ್ತು ತಿಲಕ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ.
‘ಟೆನೆಂಟ್’ ಚಿತ್ರವನ್ನು ನಿರ್ದೇಶಿಸಿರುವುದು ಶ್ರೀಧರ್ ಶಾಸ್ತ್ರಿ. ವಿ.ಎಫ್.ಎಕ್ಸ್ ನಲ್ಲಿ ನಾಲ್ಕು ವರ್ಷಗಳ ಅನುಭವವಿರುವ ಶ್ರೀಧರ್, ಈಗ ಇದೇ ಮೊದಲ ಬಾರಿಗೆ ‘ಟನೆಂಟ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಕ್ಕೂ ಮುನ್ನ ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಶ್ರೀಧರ್, ಇದೇ ಮೊದಲ ಬಾರಿಗೆ ಚಿತ್ರ ನಿರ್ದೇನಕ್ಕೆ ಕೈ ಹಾಕಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಮನೆಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ನಡಿ ನಾಗರಾಜ್ ಟಿ, ‘ಟೆನೆಂಟ್’ ಚಿತ್ರವನ್ನು ನಿರ್ಮಿಸುತ್ತಿದ್ದು, ಪೃಥ್ವಿರಾಜ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಇನ್ನು, ಶ್ರೀಧರ್ ಶಾಸ್ತ್ರಿ ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.
‘ಟೆನೆಂಟ್’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಸೋನು ಗೌಡ, ತಿಲಕ್ ಜೊತೆಗೆ ರಾಕೇಶ್ ಮಯ್ಯ, ‘ಉಗ್ರಂ’ ಮಂಜು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗಿರೀಶ್ ಹೋತೂರ್ ಸಂಗೀತ, ಉಜ್ವಲ್ ಚಂದ್ರ ಸಂಕಲನ ಮತ್ತು ಮನೋಹರ್ ಜೋಷಿ ಛಾಯಾಗ್ರಹಣವಿದೆ.