Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಉಪೇಂದ್ರ ಚಿತ್ರದ ಬಗ್ಗೆ ನಾವು ಹೆದರಬೇಕು: ‘UI’ ಕುರಿತು ಸುದೀಪ್‍

‘ನಮ್ಮ ಚಿತ್ರದಿಂದ ‘UI’ ಚಿತ್ರಕ್ಕೆ ಯಾವ ತೊಂದರೆಯೂ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು. ಉಪೇಂದ್ರ ನಮ್ಮ ಗುರುವಿದ್ದಂತೆ. ಅವರು ಮೊದಲು ಬರುತ್ತಿದ್ದಾರೆ. ಅವರ ಶಿಷ್ಯನಾಗಿ ನಾನು ನಂತರ ಬಿಡುಗಡೆ ಬರುತ್ತಿದ್ದೇನೆ. ಇಲ್ಲಿ ಯಾವುದೇ ಕ್ಲಾಶ್‍ ಇಲ್ಲ. ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಸಮಸ್ಯೆ ಇಲ್ಲ. ಇದರಿಂದ ಅನುಕೂಲವೇ ಆಗುತ್ತದೆ …‘

ಸುದೀಪ್‍ ಹೀಗೆ ಹೇಳುವುದಕ್ಕೂ ಕಾರಣವಿದೆ. ಅವರ ಅಭಿನಯದ ‘ಮ್ಯಾಕ್ಸ್’ ಚಿತ್ರವು ಡಿಸೆಂಬರ್‍ 25ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಕೇವಲ ಐದು ದಿನ ಮೊದಲು ಉಪೇಂದ್ರ ಅಭಿನಯದ ‘ಯುಐ’ ಚಿತ್ರ ತೆರೆಗೆ ಬರುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

ಈ ಕುರಿತು ಭಾನುವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್‍, ‘ಉಪೇಂದ್ರ ಅವರು ಮೊದಲು ಸ್ಟಾರ್ ಆದವರು. ಅವರ ಕೊಡುಗೆ ದೊಡ್ಡದು. ಅವರಿಂದ ಎಷ್ಟೋ ವಿಷಯಗಳಿಂದ ಕಲಿತಿದ್ದೇವೆ. ನಮ್ಮ ಚಿತ್ರ ಬಿಡುಗಡೆ ಆಗತ್ತಿರುವ ಬಗ್ಗೆ ಅವರೇ ತಲೆ ಕೆಡಿಸಿಕೊಂಡಿಲ್ಲ. ನಾವ್ಯಾಕೆ ಡಿಸೆಂಬರ್‍ 25ರಂದು ಬರುತ್ತಿದ್ದೇವೆ ಎಂದು ಅವರಿಗೂ ಗೊತ್ತಿದೆ’ ಎಂದರು.

‘ಮ್ಯಾಕ್ಸ್’ ಚಿತ್ರ ಡಿ. 25ರಂದು ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ರಜೆಯ ಸೀಸನ್‍ ಎನ್ನುವ ಸುದೀಪ್, ‘ಆಗಸ್ಟ್ ತಿಂಗಳಲ್ಲೇ ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಚಿತ್ರದ ಕೆಲಸಗಳು ಬಾಕಿ ಇದ್ದ ಕಾರಣ ಇನ್ನೊಂದು ತಿಂಗಳು ಮುಂದೆ ಹೋಗುವ ಪರಿಸ್ಥಿತಿ ಇತ್ತು. ಒಂದು ತಿಂಗಳ ಬದಲು, ಡಿಸೆಂಬರ್‍ನಲ್ಲಿ ರಜೆಯ ಸಂದರ್ಭಧಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗೆ ಇತ್ತು. ಅದರಂತೆ ಡಿಸೆಂಬರ್‍ನಲ್ಲಿ ಬಿಡುಗಡೆಯಾಗುತ್ತಿದೆ’ ಎಂದರು.

ಇನ್ನು, ಸುದೀಪ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳಾಗುತ್ತಿವೆ. ಇಷ್ಟು ವರ್ಷಗಳಲ್ಲಿ ಯಾವತ್ತೂ ಹೀಗಿ ಗ್ಯಾಪ್‍ ಆಗಿರಲಿಲ್ಲ ಎನ್ನುವ ಅವರು, ‘ನನಗೂ ಪ್ರತಿ ದಿನ ಕೆಲಸ ಮಾಡಬೇಕೆಂಬ ಆಸೆ ಇದ್ದೇ ಇದೆ. ಆದರೆ, ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಅಭಿಮಾನಿಗಳು ಕಾಯುತ್ತಿರುತ್ತಾರೆ. ಯಾವಾಗಲೂ ಚಿತ್ರದ ಬಗ್ಗೆ ಕೇಳುತ್ತಿರುತ್ತಾರೆ. ಅವರಿಗೆ ನಾನು ಸದಾ ಚಿರಋಣಿ. ಅವರು ತೋರಿಸುವ ಪ್ರೀತಿಯೇ ನಮಗೆ ಇನ್ನಷ್ಟು ಸಿನಿಮಾ ಮಾಡೋಕೆ ಪ್ರೇರಣೆ’ ಎಂದರು ಸುದೀಪ್‍.

‘ಮ್ಯಾಕ್ಸ್’ ಚಿತ್ರವನ್ನು ವಿಜಯ್‍ ಕಾರ್ತಿಕೇಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ವಿ ಕ್ರಿಯೇಷನ್ಸ್ ಬ್ಯಾನರ್‍ನಡಿ ಕಲೈಪುಲಿ ಎಸ್ ಧಾನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

Tags: