ತೆಲುಗಿನ ಹಲವು ಜನಪ್ರಿಯ ನಟರು ಬಾಲಿವುಡ್‍ನಲ್ಲಿ ಹೀರೋಗಳಾಗಿ ನಟಿಸಿದ್ದಾರೆ. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ರಾಮ್‍ಚರಣ್ ತೇಜ, ಪ್ರಭಾಸ್ ಮುಂತಾದವರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಈ ಪೈಕಿ ಸೋಲು ಕಂಡವರೇ ಹೆಚ್ಚು. ಈಗ ಜ್ಯೂನಿಯರ್ NTR ಸಹ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಹೃತಿಕ್ ರೋಶನ್ ಜೊತೆಗೆ ‘ವಾರ್ 2’ ಚಿತ್ರದಲ್ಲಿ ನಟಿಸಿದ್ದಾರೆ.
‘ವಾರ್ 2’ ಚಿತ್ರವು ಯಶ್ ರಾಜ್ ಫಿಲಂಸ್ ಸ್ಪೈ ಯೂನಿವರ್ಸ್‍ನ ಹೊಸ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಹೃತಿಕ್ ರೋಶನ್, ರಾ ಏಜೆಂಟ್ ಕಬೀರ್ ಆಗಿ ತಮ್ಮ ಪಾತ್ರವನ್ನು ಮುಂದುವರೆಸಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಇನ್ನು, ಅವರೆದುರು ವಿಲನ್ ಆಗಿ ಜ್ಯೂನಿಯರ್ NTR ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
‘ವಾರ್ 2’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರವು ಆಗಸ್ಟ್.14ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಮಂಗಳವಾರ ಜ್ಯೂನಿಯರ್ NTR ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ವಾರ್ 2’ ಚಿತ್ರದ ಟೀಸರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.
‘ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಆದರೆ, ಸದ್ಯದಲ್ಲೇ ಗೊತ್ತಾಗಲಿದೆ. ಗೆಟ್ ರೆಡಿ ಫಾರ್ ಮೋರ್…’ ಎಂದು ಜ್ಯೂನಿಯರ್ NTR ಸಂಭಾಷಣೆ ಹೇಳಿಕೊಂಡು ಎಂಟ್ರಿ ಕೊಡುತ್ತಾರೆ. ಅವರ ಮತ್ತು ಹೃತಿಕ್ ರೋಶನ್ ಅಭಿನಯದ ಸಾಹಸಮಯ ದೃಶ್ಯಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ. ಇದೊಂದು ಸ್ಪೈ ಚಿತ್ರವಾಗಿದ್ದು, ಯಶ್‍ರಾಜ್ ಫಿಲಂಸ್ ಸಂಸ್ಥೆಯು ಈ ಹಿಂದೆ ‘ಟೈಗರ್’, ‘ಪಠಾಣ್’, ‘ವಾರ್’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
‘ವಾರ್ 2’ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು, ಆದಿತ್ಯ ಜೋಪ್ರಾ ನಿರ್ಮಿಸಿದ್ದಾರೆ. ಜೊತೆಗೆ ಕಥೆಯನ್ನು ಸಹ ರಚಿಸಿದ್ದಾರೆ.





