Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ವಿಷ್ಣುವರ್ಧನ್‍ ಪುಣ್ಯಭೂಮಿ ನೆಲಸಮ: ಕೊನೆಗೂ ಬಾಯಿಬಿಟ್ಟ ಸ್ಟಾರ್ ನಟರು

rishab shetty

ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲೆಸಮ ಮಾಡಿದ ವಿಷಯ ಬಹಿರಂಗವಾದ ಮೇಲೆ ಸಾಕಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ಈ ವಿಷಯದಲ್ಲಿ ಅಭಿಮಾನ್‍ ಸ್ಟುಡಿಯೋ ಬಳಿ ಬಂಧನಕ್ಕೂ ಒಳಗಾದರು. ಆದರೆ, ಇಷ್ಟೆಲ್ಲಾ ಆದರೂ ಚಿತ್ರರಂಗದವರು, ಪ್ರಮುಖವಾಗಿ ಯಾವೊಬ್ಬ ಸ್ಟಾರ್‍ ನಟರು ಸಹ ಈ ವಿಷಯವಾಗಿ ಮಾತನಾಡಿರಲಿಲ್ಲ. ಇದೀಗ ಕ್ರಮೇಣ ಒಬ್ಬೊಬ್ಬರೇ ಬಾಯಿ ಬಿಡುತ್ತಿದ್ದಾರೆ.

ಈ ವಿಚಾರವಾಗಿ ಸುದೀಪ್‍, ಶನಿವಾರ ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆ ನಂತರ ವೀಡಿಯೋ ಸಹ ಹಂಚಿಕೊಂಡಿದ್ದರು. ಸ್ಮಾರಕ ಮರುಸ್ಥಾಪನೆ ಮಾಡುವ ವಿಷಯದಲ್ಲಿ ತಮ್ಮ ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಸುದೀಪ್‍ ಹೇಳಿಕೆ ಹೊರಬರುತ್ತಿದ್ದಂತೆಯೇ, ರಿಷಭ್‍ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಒಬ್ಬೊಬ್ಬರೇ ಈ ವಿಷಯವಾಗಿ ಮಾತನಾಡಿದ್ದಾರೆ. ಚಿತ್ರರಂಗದವರು ಈ ವಿಷಯವಾಗಿ ಕೊನೆಗೂ ಮಾತನಾಡಿದರಲ್ಲ ಎನ್ನುವುದು ಒಂದು ಕಡೆಯಾದರೆ, ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಪುಣ್ಯಭೂಮಿಯನ್ನು ಉಳಿಸಿಕೊಳ್ಳುವುದಕ್ಕೆ ಅಭಿಮಾನಿಗಳು ಕೆಲವು ವರ್ಷಗಳಿಂದ ಹೋರಾಟ ಮಾಡಿದ್ದು, ಆ ಸಂದರ್ಭದಲ್ಲಿ ಯಾರೊಬ್ಬರೂ ಬೆಂಬಲ ನೀಡದೆ, ಈಗ ಮಾತನಾಡುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಪೋಸ್ಟ್ ಮಾಡಿರುವ ರಿಷಭ್‍ ಶೆಟ್ಟಿ, ‘ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವುದು ಖಂಡನೀಯ. ಅವರನ್ನು ಹೃದಯಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಅಗೌರವ ತಂದಂತಾಗಿದೆ’ ಎಂದು ಹೇಳಿದ್ದಾರೆ.

ಒಬ್ಬ ಸಾಧಕನಿಗೆ ಈ ಅವಮಾನ ಸರಿಯಲ್ಲ ಎಂದಿರುವ ಧ್ರುವ ಸರ್ಜಾ, ‘ಸಾಧಕನಿಗೂ ಸಾವಿಲ್ಲ ಕಲೆಗೂ ಸಾವಿಲ್ಲ ವಿಷ್ಣು ಅಪ್ಪಾಜಿ ಅಜರಾಮರ… ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು, ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಆದರೆ ಇದೆಲ್ಲದಕ್ಕೂ ಉತ್ತರ ನಾನು ಒಬ್ಬ ಕನ್ನಡಿಗನಾಗಿ ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

Tags:
error: Content is protected !!