Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಚಾಕೊಲೇಟ್‍ ಬಾಯ್‍ ಆಗಿದ್ದ ವಿನಯ್‍ ವಯಸ್ಕನಾದ: ಸುದೀಪ್‍

ವಿನಯ್‍ ರಾಜಕುಮಾರ್‍ ಅಭಿನಯದ ‘ಪೆಪೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸುದೀಪ್‍ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರವು ಇದೇ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ.

ಇದುವರೆಗೂ ಬರೀ ಪ್ರೇಮಕಥೆಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ವಿನಯ್‍ ರಾಜಕುಮಾರ್, ಇದೇ ಮೊದಲ ಬಾರಿಗೆ ಆ್ಯಕ್ಷನ್‍ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‍ನಲ್ಲಿ ಸಾಕಷ್ಟು ಆ್ಯಕ್ಷನ್‍ ಮತ್ತು ರಕ್ತಪಾತವಿದ್ದು, ವಿನಯ್‍ಗೆ ಇದು ಬೇರೆಯದೇ ರೀತಿಯ ಪಾತ್ರವಾಗಿದೆ.

‘ಪೆಪೆ’ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿ ಮಾತನಾಡಿದ ಸುದೀಪ್‍, ‘ಕನ್ನಡ ಚಿತ್ರರಂಗ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸತತವಾಗಿ ಚಿತ್ರಗಳು ಸೋಲುತ್ತಿವೆ. ಕನ್ನಡ ಚಿತ್ರರಂಗಕ್ಕೆ ಇದೀಗ 90 ವರ್ಷ ತುಂಬಿದ್ದು, ಆಲದ ಮರವಾಗಿದೆ. ಇದಕ್ಕೂ ಮುನ್ನ ಹಲವು ಸಮಸ್ಯೆ ಮತ್ತು ಸೋಲುಗಳನ್ನು ನೋಡಿದೆ. ಈ ಸೋಲು ಮತ್ತು ಗೆಲುವು ಎಂಬುದು ಋತುಗಳಿದ್ದಂತೆ. ಒಂದರ ಹಿಂದೊಂದು ಬರುತ್ತಿರಬೇಕು. ಹಾಗೆ ನೋಡಿದರೆ, ಗೆಲುವಿಗಿಂತ ಸೋಲುಗಳನ ಸಂಖ್ಯೆ ಜಾಸ್ತಿ. ಆದರೂ ಚಿತ್ರರಂಗ ಮುನ್ನಡೆಯುತ್ತಿದೆ. ನಾನು ನನ್ನ ಚಿತ್ರಜೀವನದಲ್ಲಿ ಹಲವು ಸೋಲುಗಳನ್ನು ಕಂಡಿದ್ದೇನೆ. ಆದರೆ, ಅದು ಶಾಶ್ವತವಲ್ಲ. ಅದರಿಂದ ಆಚೆ ಬಂದು ಸಿನಿಮಾಗಳನ್ನು ಮಾಡುತ್ತಿರಬೇಕು. ಪ್ರೇಕ್ಷಕರನ್ನು ನಂಬಿ ಕೆಲಸ ಮಾಡುತ್ತಿರಬೇಕು. ನಮ್ಮ ಕೆಲಸ ಇಷ್ಟವಾದರೆ, ಖಂಡಿತಾ ಅವರು ನಮ್ಮ ಕೈ ಹಿಡಿಯುತ್ತಾರೆ’ ಎಂದು ಸುದೀಪ್‍ ಹೇಳಿದ್ದಾರೆ.

ಇನ್ನು, ‘ಪೆಪೆ’ ಚಿತ್ರದ ಕುರಿತು ಮಾತನಾಡಿದ ಸುದೀಪ್‍, ‘ನಾನು ಹಲವು ಟ್ರೇಲರ್‍ ಮತ್ತು ಟೀಸರ್‍ಗಳನ್ನು ಬಿಡುಗಡೆ ಮಾಡುತ್ತಿರುತ್ತಾನೆ. ಒಳ್ಳೆಯ ಕೆಲಸ ನೋಡಿದಾಗ ಖುಷಿಯಾಗುತ್ತಿದೆ. ಈ ಚಿತ್ರದ ಟ್ರೇಲರ್ ನೋಡಿದಾಗ, ಚಿತ್ರ ನೋಡಬೇಕು ಎಂದು ಕುತೂಹಲ ಮಾಡುತ್ತಿದೆ. ವಿನಯ್‍ ಇದುವರೆಗೂ ‘ಚಾಕೊಲೇಟ್‍ ಬಾಯ್‍’ ಪಾತ್ರಗಳನ್ನು ಮಾಡುತ್ತಿದ್ದರು. ಈ ಚಿತ್ರದ ನಂತರ ವಯಸ್ಕರಾಗಿದ್ದಾರೆ’ ಎಂದರು.

‘ಪೆಪೆ’ ಚಿತ್ರವನ್ನು ಶ್ರೀಲೇಶ್ ಎಸ್. ನಾಯರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಉದಯ್ ಶಂಕರ್ ಎಸ್ ಹಾಗೂ ಕೋಲಾರದ ಬಿ.ಎಮ್. ಶ್ರೀರಾಮ್ ನಿರ್ಮಿಸಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಅಭಿಷೇಕ್‍ ಕಾಸರಗೋಡು ಛಾಯಾಗ್ರಹಣ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ವಿನಯ್‍ ರಾಜಕುಮಾರ್‍ಗೆ ನಾಯಕಿಯಾಗಿ ಕಾಜಲ್‍ ಕುಂದರ್‍ ಅಭಿನಯಿಸಿದ್ದು, ಮಿಕ್ಕಂತೆ ಯಶ್‍ ಶೆಟ್ಟಿ, ಮೇದಿನಿ ಕೆಳಮನೆ, ಅರುಣ ಬಾಲರಾಜ್ ನವೀನ್‍ ಡಿ ಪಡೀಲ್‍, ಬಲ ರಾಜವಾಡಿ ಮುಂತಾದವರು ನಟಿಸಿದ್ದಾರೆ.

Tags: