Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ದುನಿಯಾ’ ವಿಜಯ್‍ ಮಗಳಿಗೆ ವಿನಯ್‍ ಹೀರೋ: ‘ಸಿಟಿ ಲೈಟ್ಸ್’ ಚಿತ್ರಕ್ಕೆ ಸೇರ್ಪಡೆ

‘ದುನಿಯಾ’ ವಿಜಯ್ ಮಗಳು ರಿತನ್ಯ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾದ ಜಡೇಶ್‍ ಹಂಪಿ ನಿರ್ದೇಶನದ ‘ರಾಚಯ್ಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ವಿಜಯ್‍ ಅವರ ಇನ್ನೊಬ್ಬ ಮಗಳು ಮೋನಿಷಾ ಸಹ ‘ಸಿಟಿ ಲೈಟ್ಸ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಆ ಚಿತ್ರಕ್ಕೆ ವಿನಯ್‍ ರಾಜಕುಮಾರ್‍ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ.

‘ಸಿಟಿ ಲೈಟ್ಸ್ ಚಿತ್ರದ ಮೊದಲ ಪೋಸ್ಟರ್‍ ಗಣೇಶ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ವಿಶೇಷವೆಂದರೆ, ‘ಸಿಟಿ ಲೈಟ್ಸ್’ ಚಿತ್ರವನ್ನು ‘ದುನಿಯಾ’ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಹಂತವಾಗಿ ನಾಯಕಿಯನ್ನು ಪರಿಚಯಿಸಲಾಗಿತ್ತು. ಇದೀಗ ನಾಯಕನನ್ನು ಪರಿಚಯಿಸುವ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ವಿನಯ್‍ ರಾಜಕುಮಾರ್‍ ಅಭಿನಯದ ‘ಪೆಪೆ’ ಚಿತ್ರ ಬಿಡುಗಡೆಯಾಗಿತ್ತು. ಚಿತ್ರ ಭಾರೀ ಪ್ರಚಾರದೊಂದಿಗೆ ಬಿಡುಗಡೆಯಾದರೂ, ಪ್ರೇಕ್ಷಕರ ನಿರೀಕ್ಷೆಗೆ ನಿಲುಕಲಿಲ್ಲ. ಈ ಚಿತ್ರದಲ್ಲಿ ಪ್ರಚಾರ ಮಾಡುವುದರ ಜೊತೆಗೆ, ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲೂ ಭಾಗಿಯಾಗಿದ್ದರು. ಇದೀಗ ವಿಜಯ್‍ ತಮ್ಮ ಮುಂದಿನ ಚಿತ್ರದಲ್ಲಿ ವಿನಯ್‍ ಅವರನ್ನು ನಿರ್ದೇಶನ ಮಾಡುತ್ತಿದ್ದಾರೆ.

ಮೋನಿಷಾಗೆ ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತಂತೆ. ಚಿತ್ರರಂಗಕ್ಕೆ ಬರಬೇಕು ಮತ್ತು ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ಅಪ್ಪನಿಗೆ ಪೀಡಿಸುತ್ತಿದ್ದರಂತೆ. ಆಗೆಲ್ಲಾ ವಿಜಯ್, ‘ಮೊದಲು ಓದು, ಸಿನಿಮಾ ಬೇಡ’ ಎಂದು ಹೇಳುತ್ತಿದ್ದರಂತೆ. ಕೊನೆಗೆ ಅಪ್ಪನನ್ನು ಒಪ್ಪಿಸುವಲ್ಲಿ ಮೋನಿಷಾ ಯಶಸ್ವಿಯಾಗಿದ್ದಾರೆ. ಬ್ಯಾಚುಲರ್‍ ಆಫ್‍ ಥಿಯೇಟರ್‍ ಮುಗಿಸಿರುವ ಮೋನಿಷಾಗೆ ರಂಗಭೂಮಿಯಲ್ಲಿ ಸಿಕ್ಕ ಅನುಭವ ಇನ್ನಷ್ಟು ವಿಶ್ವಾಸ ಹೆಚ್ಚಿಸಿತಂತೆ. ಅದೇ ವಿಶ್ವಾಸ ವಿಜಯ್‍ ಅವರನ್ನೂ ಒಪ್ಪಿಸಲಿಕ್ಕೆ ಸಾಧ್ಯವಾಯಿತು ಎಂದು ಮೋನಿಷಾ ನಂಬಿಕೆ. ಆ ನಂತರ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಒಂದು ವರ್ಷದ ಪದವಿ ಪಡೆಯುವುದಕ್ಕೆ ಅಮೇರಿಕಾಗೆ ಹಾರಿದ್ದಾರೆ. ಅಲ್ಲಿಂದ ಬಂದು ಇದೀಗ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸದ್ಯಕ್ಕೆ ಪೋಸ್ಟರ್ ಮಾತ್ರ ಬಿಡುಗಡೆಯಾಗಿದ್ದು, ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಸದ್ಯ ‘ದುನಿಯಾ’ ವಿಜಯ್‍ ಅಭಿನಯದ ‘ರಾಚಯ್ಯ’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಕೋಲಾರದಲ್ಲಿ ನಡೆಯುತ್ತಿದ್ದು, ಬಹುಶಃ ಈ ವರ್ಷಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

 

 

Tags:
error: Content is protected !!