ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ನಿಮಗೊಂದು ಸಿಹಿಸುದ್ದಿ’ಯಲ್ಲಿ ಅತಿಥಿ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದರು. ಆ ನಂತರ ವಿಜಯ್ ರಾಘವೇಂದ್ರ ಅಭಿನಯದ ‘FIR 6 To 6’ ಮತ್ತು ‘ಸ್ವಪ್ನ ಮಂಟಪ’ ಚಿತ್ರಗಳು ಬಿಡುಗಡೆಯಾಗಿವೆ. ಹೀಗಿರುವಾಗಲೇ, ಮುಂದಿನ ತಿಂಗಳು ವಿಜಯ್ ರಾಘವೇಂದ್ರ ಅಭಿನಯದ ಇನ್ನೊಂದು ಹೊಸ ಚಿತ್ರ ಬಿಡುಗಡೆಯಾಗಲಿದೆ.
ವಿಜಯ್ ಈ ಬಾರಿ ‘ರಿಪ್ಪನ್ ಸ್ವಾಮಿ’ಯಾಗಿ ತೆರೆಗೆ ಬರಲಿದ್ದಾರೆ. ಈ ಹಿಂದೆ ‘ಮಾಲ್ಗುಡಿ ಡೇಸ್’ ಚಿತ್ರ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ, ‘ರಿಪ್ಪನ್ ಸ್ವಾಮಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಆಗಸ್ಟ್ 29ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
‘ರಿಪ್ಪನ್ ಸ್ವಾಮಿ’ಯಲ್ಲೂ ವಿಜಯ್ ರಾಘವೇಂದ್ರ ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಕೊಂಡಿದ್ದಾರಂತೆ. ಇದೊಂದು ರಗ್ಗೆಡ್ ಪಾತ್ರವಾಗಿದ್ದು, ವಿಜಯ್ ಈ ಚಿತ್ರದಲ್ಲಿ ಬಂದೂಕು ಹಿಡಿದಿರುವುದು ವಿಶೇಷ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಇದ್ದು, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ, ಚಿತ್ರದ ಪೋಸ್ಟರ್‍ಗಳನ್ನು ಗಮನಿಸಿದರೆ, ಇದೊಂದು ನಕ್ಸಲಿಸಂ ಹಿನ್ನೆಲೆಯ ಚಿತ್ರ ಎಂದೆನಿಸುತ್ತದೆ.
ಚಿತ್ರದಲ್ಲಿ ವಿಜಯ್‍ಗೆ ಜೋಡಿಯಾಗಿ ಶಿವಮೊಗ್ಗ ಮೂಲದ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಮುಂತಾದವರು ಇದ್ದಾರೆ.
ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ‘ರಿಪ್ಪನ್ ಸ್ವಾಮಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರಂಗನಾಥ್ ಅವರ ಛಾಯಾಗ್ರಹಣವಿದ್ದರೆ, ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ಸಂಯೋಜಿಸಿದ್ದಾರೆ.





